

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಬಳಿಯಿಂದ ಕಲ್ಲೇರಿವರೆಗೆ 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಚತುಷ್ಪ್ಪಥ ರಸ್ತೆಯನ್ನು ಭಾನುವಾರ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಲೋಕಾರ್ಪಣೆ ಮಾಡಿದರು.
2 ಕಿ.ಮೀ. ದೂರದ ಧರ್ಮಸ್ಥಳ ಚತುಷ್ಪ್ಪಥ ರಸ್ತೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ 2019ರ ಧರ್ಮಸ್ಥಳ ಭಗವಾನ್ ಬಾಹುಬಲಿ ಮಸ್ತಕಾಭಿಷೇಕ ಸಂದರ್ಭ ಶಿಲಾನ್ಯಾಸ ನೆರವೇರಿಸಲಾಗಿತ್ತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಡಿ.ಹಷೇರ್ಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ರಾವ್, ಲೋಕೋಪಯೋಗಿ ಇಲಾಖೆ ಮುಖ್ಯಅಭಿಯಂತರ ಕಾಂತರಾಜು, ಸೂಪರಿಂಟೆಂಡೆಂಟ್ ಅಭಿಯಂತರ ಗಣೇಶ್ ಎಸ್, ಕಾರ್ಯನಿರ್ವಾಹಕ ಅಭಿಯಂತರ ಯಶವಂತ ಕುಮಾರ್, ಬೆಳ್ತಂಗಡಿ ಎಇಇ ಶಿವಪ್ರಸಾದ್ ಅಜಿಲ, ಎಇ ಗುರುಪ್ರಸಾದ್, ಜೆಇ ತೌಸಿಫ್ ಮೊದಲಾದ ಉಪಸ್ಥಿತರಿದ್ದರು.
ಡಿಸಿಎಂಗೆ ಹೆಗ್ಗಡೆ ಗೌರವ
ಬೆಳ್ತಂಗಡಿ: ಉಪಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಇಲಾಖೆ ಸಚಿವ ಗೋವಿಂದ ಎಂ.ಕಾರಜೋಳ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಶ್ರೀ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ಕ್ಷೇತ್ರದ ವತಿಯಿಂದ ಸಚಿವರನ್ನು ಡಾ.ಹೆಗ್ಗಡೆ ಗೌರವಿಸಿದರು.
ಜನರ ಪರವಾಗಿ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು. ಶ್ರೀ ಕ್ಷೇತ್ರದ ಪರವಾಗಿ ಡಾ.ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ, ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್, ದೇವಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್ ಸ್ವಾಗತಿಸಿದರು. ಡಿ.ಹಷೇರ್ಂದ್ರ ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್, ಪ್ರಮುಖರಾದ ರತ್ನವರ್ಮ ಜೈನ್, ಸುಪ್ರೀತ್ ಜೈನ್ ಮೊದಲಾದವರಿದ್ದರು.
ನೇತ್ರಾವತಿಗೆ ಸೇತುವೆ
ಕೊಕ್ಕಡ- ಪೆರಿಯಶಾಂತಿಯಿಂದ ಧರ್ಮಸ್ಥಳಕ್ಕೆ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಆಶಿಸಿದ ಡಾ.ಡಿ.ಹೆಗ್ಗಡೆಯವರು, ಕೆಲವು ಕಡೆ ರಸ್ತೆ ವಿಸ್ತರಣೆಗೆ ಅರಣ್ಯ ಇಲಾಖೆಯ ಜಾಗ ಅಡಚಣೆಯಾಗುತ್ತಿದೆ ಎಂಬುದನ್ನು ಸಚಿವರ ಗಮನಕ್ಕೆ ತಂದರು. ಸ್ಪಂದಿಸಿದ ಸಚಿವರು ಅರಣ್ಯ ಇಲಾಖೆ ಜಾಗ ತೆರವುಗೊಳಿಸಿ, ಅವರಿಗೆ ಸರ್ಕಾರದಿಂದ ಬದಲಿ ಜಾಗ ನೀಡುವ ಭರವಸೆ ನೀಡಿದರು. 1961ರಲ್ಲಿ ನಿರ್ಮಾಣಗೊಂಡ ನೇತ್ರಾವತಿ ಸೇತುವೆ ಹಳೆಯದಾಗಿದೆ. ಹೊಸ ಸೇತುವೆ ನಿರ್ಮಿಸುವಂತೆಯೂ ಹೆಗ್ಗಡೆಯವರು ಸಚಿವರನ್ನು ಕೋರಿದರು.