ಬಳ್ಳಾರಿ ; ಆಂಧ್ರದ ಮದನಪಲ್ಲಿ ಬಳಿ ಸರ್ಕಾರಿ ಬಸ್‌ಗೆ ಟೆಂಪೋ ಟ್ರಾವೆಲ್ ಡಿಕ್ಕಿ ಹೊಡೆದ ಪರಿಣಾಮ ನಗರದ ನಾಲ್ವರು ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಇಲ್ಲಿನ ಬೆಳಗಲ್ ಕ್ರಾಸ್ ನಿವಾಸಿಗಳಾದ ನಾಗೇಂದ್ರಪ್ಪ (60), ಇವರ ಸಹೋದರಿ ಅನುಸೂಯಮ್ಮ (55), ನಾಗೇಂದ್ರಪ್ಪ ಅವರ ಮೊಮ್ಮಗಳು ಜಾನ್ವಿ (3) ಹಾಗೂ ಟೆಂಪೋ ಚಾಲಕ ಮಣಿಕಂಠ (21) ಮೃತರು. ಇನ್ನೂಳಿದ ವಸಂತಮ್ಮ, ಕುಮಾರಸ್ವಾಮಿ, ಋತ್ವಿಕಾ, ಬಿ.ನಾಗಾರ್ಜುನ, ಬಿ.ಜಿ. ಕುಮಾರಸ್ವಾಮಿ, ರಾಕೇಶ್, ಶಶಾಂಕ್ ಸದ್ಯ ಟ್ರಾಮ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಕಳೆದ ಎರಡು ದಿನದ ಹಿಂದೆ ಕುಟುಂಬದ ಹನ್ನೊಂದು ಜನರು ತಿರುಪತಿ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ತವರೂರಿಗೆ ಮರಳುತ್ತಿದ್ದ ವೇಳೆ ಟೆಂಪೋ ಟ್ರಾವೆಲ್ ಚಾಲಕನ ನಿಯಂತ್ರಣ ತಪ್ಪಿ ಆಂಧ್ರದ ಸರ್ಕಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿಯೇ ಓರ್ವ ಮೃತಪಟ್ಟರೆ, ಇನ್ನೂ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಚಿಕಿತ್ಸೆಗಾಗಿ ಆಂಧ್ರದ ಕದಿರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಟ್ರಾಮ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ. ಈ ಕುರಿತು ಆಂಧ್ರದ ತಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
======