ಬಳ್ಳಾರಿ : ಅದಿರು ಲಾರಿಯೊಂದು ರಭಸವಾಗಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ತಾಯಿ, ಇಬ್ಬರು ಮಕ್ಕಳು ಮತ್ತು ಓರ್ವ ಗರ್ಭಿಣಿ ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಡೂರು ತಾಲೂಕಿನ ಜೈಸಿಂಗಾಪುರ ಗ್ರಾಮದ ಬಳಿ ಸೋಮವಾರ ನಡೆದಿದೆ.
ಸಂಡೂರು ತಾಲೂಕಿನ ಲಕ್ಷ್ಮೀಪುರ ಗ್ರಾಮದ ನಿವಾಸಿಗಳಾದ ಜಯಲಕ್ಷ್ಮೀ(21), ಆಶಾ(28) ಮಕ್ಕಳಾದ ಸಾಯಿ ಸಾತ್ವಿಕ (5), ಬಿಂದುಶ್ರೀ (ಒಂಬತ್ತು ತಿಂಗಳ ಮಗು )ಮೃತರು. ಜಯಲಕ್ಷ್ಮೀ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದರು. ಕಾರು ಚಾಲಕ ನಂದೀಶ್ ಹಾಗೂ ಮಹಾಲಕ್ಷ್ಮೀ ಎಂಬ ಬಾಲಕಿಯು ಗಂಭೀರ ಗಾಯಗೊಂಡಿದ್ದು ಕೊಪ್ಪಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
ಏನಿದು ಘಟನೆ : ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಸಲುವಾಗಿ ಕಾರು ಚಾಲಕ ನಂದೀಶ್ ಕುಟುಂಬ ಸಮೇತ ಲಕ್ಷ್ಮೀಪುರ ಗ್ರಾಮದಿಂದ ಹೊಸಪೇಟೆಗೆ ತೆರಳುತ್ತಿದ್ದರು. ಈ ವೇಳೆ ಹೊಸಪೇಟೆ ಕಡೆಯಿಂದ ವೇಗವಾಗಿ ಬಂದ ಆದಿರು ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿಯ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.