ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ

HLY ARREST
Published on

ಹಳಿಯಾಳ: ಪಟ್ಟಣದಲ್ಲಿ ಜು. 16ರಂದು ನಡೆದಿದ್ದ ಸರಣಿ ಕಳ್ಳತನಕ್ಕೆ ಸಂಬಂಧಿಸಿದಂತೆ ನಾಲ್ವರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆರೆಯ ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯ ಪಂಢರಾಪುರದ ವ್ಯಾಪ್ತಿಯ ಗ್ರಾಮಗಳ ಕುಖ್ಯಾತ ಕಳ್ಳರನ್ನು ಚಾಣಾಕ್ಷ ತನಿಖೆಯಿಂದ ಹೆಡೆಮುರಿ ಕಟ್ಟಿ ಅಂದಾಜು 7.95 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕಳವಿಗೆ ಬಳಸಿದ್ದ ಅಂದಾಜು 4. ಲಕ್ಷ ರೂ.ಗಳ ಮೌಲ್ಯದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪಿಗಳಾದ ಲಖನ್ ಅಶೋಕ ಕುಲಕರ್ಣಿ ಉರ್ಫ್ ಸಚಿನ ಮಾನೆ, ಸಂದೀಪ ದಿಲೀಪ ಲವಟೆ, ವಿವೇಕ ಶಿವಪ್ಪ ಕುಂಬಾರ, ಅಜೀಜ್ ಉರ್ಫ್ ಚೋಟೆ ದಾದಾಪೀರ ಮನಗುಳಿ ಅವರುಗಳನ್ನು ಬಂಧಿಸಿ ಕಳವು ಮಾಡಿದ ಸರಕುಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿ ನಾಲ್ವರನ್ನು ಜೈಲಿಗಟ್ಟಲಾಗಿದೆ.

ಪೊಲೀಸ್ ವಿಚಾರಣೆ ವೇಳೆ ಯಲ್ಲಾಪುರ ಹಾಗೂ ಕುಂದಾಪುರದಲ್ಲಿ ನಡೆದ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ. ಇವರ ಮೇಲೆ ಈಗಾಗಲೇ 32ಕ್ಕೂ ಹೆಚ್ಚಿನ ಕಳ್ಳತನ, ಸುಲಿಗೆ, ದರೋಡೆ ಹಾಗೂ ಹಲ್ಲೆ ಪ್ರಕರಣಗಳು ಬೇರೆ ಬೇರೆ ರಾಜ್ಯಗಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಮೂರು ಪ್ರಕರಣಗಳಲ್ಲಿ ಶಿಕ್ಷೆ ಆಗಿರುವುದೂ ಗಮನಾರ್ಹವಾಗಿದೆ.

ಉತ್ತರ ಕನ್ನಡ ಜಿಲ್ಲಾ ಎಸ್ಪಿ ದಿಲೀಪ ಎಂ.ಎನ್., ಎಎಸ್ಪಿ ಜಗದೀಶ ನಾಯ್ಕ, ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಜಯಪಾಲ್ ಪಾಟೀಲ ಅವರ ಮಾರ್ಗದರ್ಶನದಲ್ಲಿ ಹಳಿಯಾಳ ಠಾಣೆಯ ಪಿಎಸ್​ಐಗಳಾದ ಬಸವರಾಜ ಮಬನೂರ, ಕೃಷ್ಣ ಅರಕೇರಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಗಣಪತಿ, ಶ್ರೀಶೈಲ್ ಜಿ.ಎಂ., ವಿನೋದ ಜಿ.ಬಿ., ಲಕ್ಷ್ಮಣ ಪೂಜಾರಿ, ಅರವಿಂದ ಭಜಂತ್ರಿ, ಮಂಜುನಾಥ ಬಾಲಿ, ಆಯಾಜ್ ಯಾದವಾಡ, ಕಾಶಿನಾಥ ಬಿಳ್ಳೂರ, ವಿನಾಯಕ ನಾಯ್ಕ, ಯೋಗೇಶ ಗೌಡಾ ಹಾಗೂ ದಾಂಡೇಲಿ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಕೃಷ್ಣ ಬೆಳ್ಳಿವರಿ, ಉದಯ ಗುನಗಾ, ಉಮೇಶ ತೇಲಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net