ಹುಲಿಯೂರುದುರ್ಗ: ರಾಜ್ಯ ಹೆದ್ದಾರಿ 33ರ ದೊಡ್ಡಮಾವತ್ತೂರು ಟೋಲ್ನಲ್ಲಿ ಮಂಗಳವಾರ ಬೆಳಗಿನ ಜಾವ ಲಾರಿಯೊಂದು ಡಿಕ್ಕಿಯಾಗಿ ಒಂದು ಟೋಲ್ಗೇಟ್ ಜಖಂಗೊಂಡು, ಲಾರಿ ಚಾಲಕ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಟೋಲ್ ಸಿಬ್ಬಂದಿ ಆನಂದ, ಉಮೇಶ, ಕೇಶವ ಹಾಗೂ ಡಿಸೇಲ್ ತುಂಬಿದ್ದ ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಣಿಗಲ್ ಕಡೆಯಿಂದ ಬಂದ ಟೈಲ್ಸ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಟೋಲ್ ಗೇಟ್ಗೆ ಗುದ್ದಿದೆ. ಇದೇ ಸಂದರ್ಭದಲ್ಲಿ ಮದ್ದೂರು ಕಡೆಯಿಂದ ಬಂದು ಟೋಲ್ನಲ್ಲಿ ನಿಂತಿದ್ದ ಡಿಸೇಲ್ ತುಂಬಿದ್ದ ಲಾರಿಗೆ ಡಿಕ್ಕಿಯಾಗಿದ್ದು, ಬಳಿಕ ಟೋಲ್ ಸಿಬ್ಬಂದಿ ಇದ್ದ ಕೇಂದ್ರಕ್ಕೆ ನುಗ್ಗಿದೆ. ಈ ಪರಿಣಾಮ ಸುಂಕ ವಸೂಲಿ ಕೇಂದ್ರ ಸಂಪೂರ್ಣ ಜಖಂಗೊಡಿದೆ. ಟೋಲ್ಗೆ ಅಳವಡಿಸಿದ್ದ ಛಾವಣಿ ಮುರಿದು ಬಿದ್ದಿದೆ. ಬಯೋ ಡಿಸೇಲ್ ತುಂಬಿದ್ದ ಲಾರಿ ಪಲ್ಟಿಯಾಗಿ ಸಾವಿರಾರು ಲೀಟರ್ ಡೀಸೆಲ್ ಮಣ್ಣುಪಾಲಾಗಿದೆ. ಅಪಘಾತದಿಂದ ರಸ್ತೆಯಲ್ಲಿ ಗಂಟೆಗೂ ಹೆಚ್ಚುಕಾಲ ವಾಹನ ದಟ್ಟಣೆ ಉಂಟಾಗಿತ್ತು. ಅಪಘಾತದ ಬಳಿಕ ಟೈಲ್ಸ್ ತುಂಬಿದ್ದ ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟೋಲ್ ಸಿಬ್ಬಂದಿ ಮಾಹಿತಿ ಪ್ರಕಾರ ಲಾರಿ ಚಾಲಕ ನಿದ್ರೆಯಲ್ಲಿದ್ದ ಎಂದು ತಿಳಿದು ಬಂದಿದೆ. ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.