ಹೊಂಡದಲ್ಲಿ ಬೈಕ್ ಬಿದ್ದು ನಾಲ್ವರಿಗೆ ಗಾಯ

Bkl honda
Published on

ಭಟ್ಕಳ: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪುರಸಭೆ ವ್ಯಾಪ್ತಿಯ ಡೊಂಗರಪಲ್ಲಿಯಲ್ಲಿ ಕಾಂಕ್ರಿಟ್ ರಸ್ತೆಯ ಒಂದು ಭಾಗ ಕೊಚ್ಚಿಹೋಗಿದ್ದು, ಸ್ಥಳದಲ್ಲಿ ಆಳವಾದ ಗುಂಡಿ ನಿರ್ಮಾಣವಾಗಿದೆ. ಅದೆ ಮಾರ್ಗದಲ್ಲಿ ಸಾಗುತ್ತಿದ್ದ ಬೈಕ್ ಹೊಂಡದೊಳಗೆ ಕೊಚ್ಚಿ ಹೋಗಿ ನಾಲ್ವರು ಗಾಯಗೊಂಡಿದ್ದಾರೆ.

ಹೊಂಡದಲ್ಲಿ ಕೊಚ್ಚಿಹೋಗುತ್ತಿದ್ದವರ ಕಿರುಚಾಟ ಕೇಳಿ ಮೂನ್ ಸ್ಟಾರ್ ಸ್ಪೋರ್ಟ್ಸ್ ಸೆಂಟರ್ ಸದಸ್ಯ ಬಾವಾ ಅಮೀರ್ ಅವರು ರಾತ್ರಿಯಲ್ಲಿ ಅಪಾಯವನ್ನು ಲೆಕ್ಕಿಸದೆ ಹೊಂಡದಲ್ಲಿ ಹಾರಿ ದಂಪತಿ ಮತ್ತು ಎರಡು ಮಕ್ಕಳನ್ನು ರಕ್ಷಿಸಿದ್ದಾರೆ. ಕುಟುಂಬವೂ ಅಪಾಯದಿಂದ ಪಾರಾಗಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಬಾವಾ ಅಮೀರ್ ಅವರ ಕಾಲಿಗೆ ಗಾಯವಾಗಿದೆ.

ಮಗದುಮ್ ಕಾಲನಿಯಂತಹ ಎತ್ತರದ ಪ್ರದೇಶಗಳಿಂದ ವೇಗವಾಗಿ ಹರಿಯುವ ಮಳೆ ನೀರು ಸಾಮಾನ್ಯವಾಗಿ ಡೊಂಗರಪಲ್ಲಿ ಮೂಲಕ ಸರಾಬಿ ನದಿಯನ್ನು ಸೇರುತ್ತದೆ. ಆ ಪ್ರದೇಶದಲ್ಲಿನ ಒಳಚರಂಡಿ ವ್ಯವಸ್ಥೆ ಅವೈಜ್ಞಾನಿಕವಾಗಿದ್ದು ನೀರು ಸರಾಗವಾಗಿ ಹರಿಯವುದಿಲ್ಲ. ರಭಸವಾಗಿ ಹರಿಯುವ ನೀರಿನಿಂದಾಗಿ ರಸ್ತೆ ಕೊಚ್ಚಿಹೋಗಿ ಹೊಂಡ ನಿರ್ಮಾಣವಾಗಿದೆ.

ಘಟನೆಯ ನಡೆಯುತ್ತಿರುವಂತೆ ಹಾನಿಗೊಳಗಾದ ರಸ್ತೆಯಲ್ಲಿ ವಾಹನ ಸಂಚರಿಸದಂತೆ ಸ್ಥಳೀಯರು ತಡೆಗೋಡೆ ನಿರ್ಮಿಸಿದ್ದರು. ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಮೊಹ್ತಿಶಾಮ್ ಮತ್ತು ಸ್ಥಳೀಯ ಕೌನ್ಸಿಲರ್ ಫರ್ಜಾನಾ ಯೂನಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಭಾನುವಾರ ಹೊಂಡ ನಿರ್ಮಾಣವಾದ ಸ್ಥಳಕ್ಕೆ ಮಣ್ಣು ತುಂಬಿಸಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net