

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬಳಂಜ ಗ್ರಾಮದ ಕರ್ಮನ್‌ದೊಟ್ಟು ಜನತಾ ಕಾಲನಿಯಲ್ಲಿ ನಾಲ್ಕು ಮನೆಗಳು ದರೆ ಕುಸಿತದಿಂದಾಗಿ ಬೀಳುವ ಭೀತಿಯಲ್ಲಿವೆ. ಇಲ್ಲಿನ ಕುಟುಂಬಗಳನ್ನು ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಸರ್ಕಾರದಿಂದ ಕೊಟ್ಟಿರುವ ಜಾಗದಲ್ಲಿ ಇಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ಮನೆ ನಿರ್ಮಿಸಿಕೊಂಡಿದ್ದು, ಕಡಿದಾದ ಬೆಟ್ಟ ಗುಡ್ಡದ ರೀತಿಯಲ್ಲಿ ಇದ್ದ ಜಾಗವನ್ನು ಸಮತಟ್ಟು ಮಾಡದೆ ಮನೆ ಕಟ್ಟಲು ಅವಕಾಶ ಮಾಡಿ ಕೊಟ್ಟ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಆನಂದ ಆಚಾರ್ಯ, ಉಸ್ಮಾನ್, ಚಂದ್ರಹಾಸ ಹಾಗೂ ಚಂದ್ರಾವತಿ ಎಂಬುವರ ಮನೆಗಳು ಕುಸಿದು ಬೀಳುವ ಅಪಾಯದಲ್ಲಿವೆ.ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಿನೇಶ್ ಪಿ.ಕೆ. ಭೇಟಿ ನೀಡಿ ಕುಟುಂಬಗಳನ್ನು ಪಂಚಾಯಿತಿಯಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುವಲ್ಲಿ ಸಹಕರಿಸಿದರು.