ನಾಲ್ಕು ಬಣಗಳಿಂದ ನಾಮಪತ್ರ ಸಲ್ಲಿಕೆ

anjuman election
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಸುಮಾರು 18 ತಿಂಗಳುಗಳ ಬಳಿಕ ನಡೆಯುತ್ತಿರುವ ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆಯಾದ ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ನ ಆಡಳಿತ ಮಂಡಳಿ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ನಾಲ್ಕು ಬಣಗಳು ನಾಮಪತ್ರ ಸಲ್ಲಿಸಿವೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಸೋಮವಾರ ಒಂದೇ ದಿನ 212 ನಾಮಪತ್ರಗಳು ಸಲ್ಲಿಕೆಯಾದವು. ಒಟ್ಟು 215 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಎಂ.ಸಿ. ಸವಣೂರ, ನಜೀರ ಅಹ್ಮದ್ ಗದಗಕರ ಹಾಗೂ ಮಜರ್ ಖಾನ್ ತಮ್ಮ ಬಣಗಳ ತಲಾ 52 ಅಭ್ಯರ್ಥಿಗಳೊಂದಿಗೆ ನಾಮಪತ್ರ ಸಲ್ಲಿಸಿದರು. ಪಕ್ಷೇತರರಾಗಿ 7 ಜನ ನಾಮಪತ್ರ ಸಲ್ಲಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಂ.ಸಿ. ಸವಣೂರ ಹಾಗೂ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅಲ್ತಾಫ್ ಕಿತ್ತೂರ ಬಣದ ಅಭ್ಯರ್ಥಿಗಳು ಬೆಳಗ್ಗೆ ಹಳೇ ಹುಬ್ಬಳ್ಳಿ ಫತೇಶಾವಲಿ ದರ್ಗಾದಿಂದ ಬೈಕ್ ರ‍್ಯಾಲಿ ಮೂಲಕ ಕಾರವಾರ ರಸ್ತೆ, ಚನ್ನಪೇಟ, ಮುಲ್ಲಾ ಬಾಡಾ, ಮರಾಠಗಲ್ಲಿಯಿಂದ ಹಾದು ಘಂಟಿಕೇರಿಯ ನೆಹರು ಕಾಲೇಜು ತಲುಪಿ ನಾಮಪತ್ರ ಸಲ್ಲಿಸಿದರು.

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ನೇತೃತ್ವದ ಬಣದವರು ಹಳೇ ಹುಬ್ಬಳ್ಳಿ ಇಂಡಿಪಂಪ್ ದರ್ಗಾದಿಂದ ಮೆರವಣಿಗೆಯಲ್ಲಿ ಆಗಮಿಸಿ, ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರಿಂದ ಅಭ್ಯರ್ಥಿಗಳು, ಬೆಂಬಗಲಿಗರು ನೆಹರು ಕಾಲೇಜ್ ಬಳಿ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ, ಆಸ್ಪತ್ರೆ ಮಂಡಳಿ ಕಾರ್ಯದರ್ಶಿ, ಶಿಕ್ಷಣ ಮಂಡಳಿಯ 7 ಸದಸ್ಯರು, ಆಸ್ಪತ್ರೆ ಮಂಡಳಿಯ 4 ಸದಸ್ಯರು, 10 ಪೋಷಕ ಸದಸ್ಯರು ಹಾಗೂ 25 ಸಾಮಾನ್ಯ ಸದಸ್ಯ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ.

ಫೆ. 6ರಂದು ನಾಮಪತ್ರಗಳ ಪರಿಶೀಲನೆ, 7ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫೆ. 18ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ಹಾಗೂ ಸಂಜೆ 6ರಿಂದ ಮತ ಎಣಿಕೆ ಪ್ರಕ್ರಿಯೆ ಘಂಟಿಕೇರಿಯ ಸರ್ಕಾರಿ ಪ್ರೌಢಶಾಲೆ (ಬಿಇಒ ಕಚೇರಿ ಆವರಣದಲ್ಲಿನ)ಯಲ್ಲಿ ನಡೆಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ತಾಜುದ್ದಿನ್ ಶೇಖ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net