

ಗಂಗೊಳ್ಳಿ: ಬೈಂದೂರು ತಾಲೂಕಿನ ಮರವಂತೆಯಲ್ಲಿ ಶುಕ್ರವಾರ ರಾತ್ರಿ 20.630 ಕೆಜಿ ಗಾಂಜಾ ವಶಪಡಿಸಿಕೊಂಡ ಗಂಗೊಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ದ.ಕ.ಜಿಲ್ಲೆಯ ಹರೇಕಳ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್(32), ಬೈಂದೂರು ಕಿರಿಮಂಜೇಶ್ವರ ಗ್ರಾಮದ ಅಲ್ಫಾಜ್(20) ಮತ್ತು ಹೊನ್ನಾವರದ ಮಹಮ್ಮದ್ ಇಸೂಫ್ ಸಾಬ್(45) ಬಂಧಿತರು.
ಗಂಗೊಳ್ಳಿ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು, ಭಟ್ಕಳದಿಂದ ಕುಂದಾಪುರಕ್ಕೆ ಬರುತ್ತಿದ್ದ ಇನ್ಸುಲೇಟರ್ ವಾಹನವನ್ನು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮರವಂತೆ ಮಸೀದಿ ಬಳಿ ತಡೆದು ತಪಾಸಣೆ ನಡೆಸಿದಾಗ ವಾಹನದಲ್ಲಿ 20.630ಕಿಲೋ ಗಾಂಜಾ ದೊರೆತಿದೆ. ಆರೋಪಿಗಳಿಂದ ಗಾಂಜಾ, ಐದು ಮೊಬೈಲ್‌ಗಳು, ಇನ್ಸುಲೇಟರ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 14.45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಸೇವನೆ, ವ್ಯಕ್ತಿ ಬಂಧನ
ಕಾರ್ಕಳ: ನಗರದ ಬಂಗ್ಲೆಗುಡ್ಡೆ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ನಲ್ಲಿ ಗಾಂಜಾವನ್ನು ಸೇರಿಸಿ ಸೇದುತ್ತಿದ್ದ ಆರೋಪಿಯನ್ನು ನಗರ ಠಾಣಾ ಉಪಾಧಿಕಾರಿ ದಾಮೋದರ ಕೆ.ಬಿ.ಬಂಧಿಸಿದ್ದಾರೆ.
ಬಂಗ್ಲೆಗುಡ್ಡೆ ಸದ್ಬಾವನ ನಗರದ ನಿವಾಸಿ ನಜೀರ್(22) ಬಂಧಿತ ಆರೋಪಿ. ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಗಾಂಜಾ ಸೇವನೆ ಇಬ್ಬರ ವಿರುದ್ಧ ಪ್ರಕರಣ
ಪಡುಬಿದ್ರಿ: ಇಲ್ಲಿನ ಬೋರ್ಡ್ ಶಾಲಾ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಪಡುಬಿದ್ರಿ ಕಲ್ಲಟ್ಟೆ ಪ್ರಮೋದ್ (38)ಮತ್ತು ಗಗನ್ (21)ಎಬುವರ ವಿರುದ್ಧ ಪಡುಬಿದ್ರಿ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಶುಕ್ರವಾರ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ನಡೆಸಿದ್ದು, ಮಾದಕ ವಸ್ತು ಗಾಂಜಾ ಸೇವಿಸಿರುವುದಾಗಿ ವೈದ್ಯರು ನೀಡಿದ ದೃಢ ಪತ್ರದಂತೆ ಆರೋಪಿಗಳ ವಿರುದ್ಧ ಪ್ರಕರಣ ಪೊಲೀಸರು ದಾಖಲಿಸಿದ್ದಾರೆ.