ನಾಲ್ವರು ಮೀನುಗಾರರ ರಕ್ಷಣೆ

Rescued fishermen
Published on

ಗೋಕರ್ಣ: ಹತ್ತಿರದ ಮೀನುಗಾರ ಗ್ರಾಮ ಗಂಗೆಕೊಳ್ಳದಿಂದ ಅಂದಾಜು 24 ನಾಟಿಕಲ್ ಮೈಲು ದೂರದಲ್ಲಿ ಮುಳುಗಿದ ಮೀನುಗಾರಿಕೆ ಬೋಟ್​ನಲ್ಲಿದ್ದ ನಾಲ್ವರು ಮೀನುಗಾರರನ್ನು ರಕ್ಷಿಸಿ ದಡಕ್ಕೆ ತಂದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಅರೆಬಿಯನ್ ಸೀ ಹೆಸರಿನ ಬೋಟೊಂದು ಗುರುವಾರ ನಸುಕಿನಲ್ಲಿ ಗಂಗೆಕೊಳ್ಳದಿಂದ ಮೀನುಗಾರಿಕೆಗೆ ತೆರಳಿತ್ತು. ಬೆಳಗಿನ 6 ಗಂಟೆ ವೇಳೆಗೆ ಗಂಗೆಕೊಳ್ಳ ಸಮುದ್ರದಿಂದ 24 ನಾಟಿಕಲ್ ಮೈಲು ದೂರದಲ್ಲಿರುವಾಗಿ ಬೀಸಿದ ಜೋರಾದ ಗಾಳಿಗೆ ಅಬ್ಬರದ ಅಲೆಗಳೆದ್ದು ಬೋಟ್​ನಲ್ಲಿ ನೀರು ತುಂಬಿ ಬೋಟ್ ಸಮುದ್ರದಲ್ಲಿ ಮುಳುಗಿತು.

ಈ ವೇಳೆ ಬೋಟ್​ನಲ್ಲಿದ್ದ ಅದರ ಮಾಲೀಕ ಸಂದೀಪ ಸುರೇಶ ತಾಂಡೇಲ ಮತ್ತು ಸುಜನ್ ಮಹಾಬಲೇಶ್ವರ ಕವಣೇಕರ, ಪ್ರಶಾಂತ ಫಂಡರಿನಾಥ ಮೇತಾ ಮತ್ತು ರಾಜು ನಾಮದೇವ ಕಾಂಬಳೆ ಸಮುದ್ರಕ್ಕೆ ಹಾರಿದರು.

ಸುಮಾರು ಎರಡು ಗಂಟೆಗೂ ಹೆಚ್ಚಿನ ಕಾಲ ಸಮುದ್ರದಲ್ಲಿ ಈಜಿದ ಇವರು ದೂರದಲ್ಲಿ ಸಾಗುತ್ತಿದ್ದ ಮಂಗಳೂರಿನ ಓಸಿಯನ್ ಬ್ಲೂ ಮೀನುಗಾರಿಕೆ ಬೋಟ್​ನ ಗಮನ ಸೆಳೆಯಲು ಸಫಲರಾದರು.

ತಕ್ಷಣ ಸಹಾಯಕ್ಕೆ ಬಂದ ಮಂಗಳೂರು ಮೀನುಗಾರರು ಇವರೆಲ್ಲರನ್ನು ರಕ್ಷಿಸಿ ತಮ್ಮ ಬೋಟ್​ನಲ್ಲಿ ದಡಕ್ಕೆ ತಂದು ಮುಟ್ಟಿಸಿದರು. ದಡ ಸೇರಿದ ಎಲ್ಲ ನಾಲ್ವರು ಸುರಕ್ಷಿತವಾಗಿದ್ದು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಮ್ಮ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net