

ಲಕ್ಷೆ್ಮೕಶ್ವರ: ತಾಲೂಕಿನ ಸುವರ್ಣಗಿರಿ ತಾಂಡಾ ವಿದ್ಯಾರ್ಥಿನಿಯರು ಪಟ್ಟಣದಲ್ಲಿರುವ ಶಾಲೆಗೆ ತೆರಳಲು ಬಸ್ನಲ್ಲಿ ಕುಳಿತಿದ್ದಾಗ ಅವರ ಮೇಲೆ ಅದೇ ಗ್ರಾಮದ ಕೆಲ ಕಿಡಿಗೇಡಿ ಯುವಕರು ಕಲುಷಿತ (ಮಿಶ್ರಿತ) ಬಣ್ಣ ಎರಚಿದ್ದರಿಂದ ನಾಲ್ಕು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಶುಕ್ರವಾರ ನಡೆದಿದೆ.
ಘಟನೆ ವಿವರ: ತಾಲೂಕಿನ ಸುವರ್ಣಗಿರಿ ತಾಂಡಾದಿಂದ 10ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ಲಕ್ಷೆ್ಮೕಶ್ವರದ ಉಮಾ ವಿದ್ಯಾಲಯ ಹೈಸ್ಕೂಲ್ಗೆ ಬರಲು ಬಸ್ನತ್ತ ಧಾವಿಸಿದ್ದಾರೆ. ಆಗ ಅದೇ ಗ್ರಾಮದ ಕೆಲ ಯುವಕರು ವಿದ್ಯಾರ್ಥಿನಿಯರ ಮೇಲೆ ಬಣ್ಣ ಎರಚಲು ಮುಂದಾಗಿದ್ದಾರೆ. ಆಗ ವಿದ್ಯಾರ್ಥಿನಿಯರು (8, 9ನೇ ತರಗತಿ) ಪರೀಕ್ಷೆ ಬರೆಯಲು ಹೊರಟಿದ್ದೇವೆ. ಪ್ಲೀಸ್ ಬಣ್ಣ ಹಾಕಬೇಡಿ ಎಂದು ಓಡೋಡಿ ಬಂದು ಬಸ್ ಹತ್ತಿದ್ದಾರೆ. ಆಗ ಬಸ್ ಚಾಲಕ-ನಿರ್ವಾಹಕರು ಯುವಕರಿಗೆ ಬಣ್ಣ ಎರಚಬೇಡಿ ಎಂದು ಹೇಳಿ ಬಸ್ಸನ್ನು ಅಲ್ಲಿಂದ ಚಲಾಯಿಸಲು ಮುಂದಾಗಿದ್ದಾರೆ. ಆದರೂ ಕೆಲ ಕಿಡಿಕೇಡಿ ಯುವಕರು ಕಲುಷಿತ ಬಣ್ಣ (ಮೊಟ್ಟೆ, ಗೊಬ್ಬರ, ಕೋಲಿಂಕ್ಸ್ ಮಿಶ್ರಿತ) ಎರಚಿದ್ದಾರೆ. ಬಸ್ನ ತುಂಬಾ ದುರ್ನಾತ ಹೆಚ್ಚಿ ಕೆಲ ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದಾರೆ. ಮಾರ್ಗ ಮಧ್ಯದಲ್ಲೇ ಮತ್ತೊಂದು ಬಸ್ಗೆ ವಿದ್ಯಾರ್ಥಿನಿಯರನ್ನು ಹತ್ತಿಸಿ ಕಳುಹಿಸಲಾಗಿದೆ. ಲಕ್ಷೆ್ಮೕಶ್ವರಕ್ಕೆ ಬಂದು ಬಸ್ ಇಳಿಯುತ್ತಿದ್ದಂತೆಯೇ ವಿದ್ಯಾರ್ಥಿನಿಯರು ವಾಂತಿ, ಉಸಿರಾಟದ ತೊಂದರೆಗೊಳಗಾಗಿದ್ದಾರೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು, ಶಾಲಾ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅದರಲ್ಲಿ ಗೌರಿ ಪೂಜಾರ, ದಿವ್ಯಾ ಲಮಾಣಿ ಇಬ್ಬರು ತೀವ್ರ ಉಸಿರಾಟದ ತೊಂದರೆಗೊಳಗಾಗಿದ್ದರಿಂದ ಅವರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿನಿಯರಾದ ಅಂಕಿತಾ ಲಮಾಣಿ ಮತ್ತು ತನುಷಾ ಲಮಾಣಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಶಾಲಾ ಶಿಕ್ಷಕರು, ಪೊಲೀಸರು ಆಸ್ಪತ್ರೆ ದೌಡಾಯಿಸಿದರು. ಘಟನೆಯಿಂದ ಸುವರ್ಣಗಿರಿ ತಾಂಡಾದಲ್ಲಿ ತೀವ್ರ ವಾಗ್ವಾದ, ಜಗಳ ನಡೆದಿದೆ. ಪಿಎಸ್ಐ ನಾಗರಾಜ ಗಡಾದ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಸೂಕ್ತ ಕ್ರಮಕ್ಕೆ ತನಿಖೆ ಕೈಗೊಂಡಿದ್ದಾರೆ.