ಮಿಸ್ ಫೈರ್‌ನಿಂದ ನಾಲ್ವರು ರೈತರಿಗೆ ಗಾಯ

Oplus_131072
ಮದ್ದೂರು ಗ್ರಾಮದ ಹೊರ ಪ್ರದೇಶದಲ್ಲಿ ಸಾವನ್ನಪ್ಪಿರುವ ಚಿರತೆ
Published on

ಯಳಂದೂರು: ಚಿರತೆಯನ್ನು ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಸಿದ ಗುಂಡಿನಿಂದ ನಾಲ್ವರು ರೈತರು ಗಾಯಗೊಂಡಿದ್ದು, ಚಿರತೆಯೂ ಸಹಾ ಮೃತಪಟ್ಟಿದೆ.

ಮದ್ದೂರು ಗ್ರಾಮದ ರೈತರಾದ ರವಿ. ಶಿವು, ರಂಗಸ್ವಾಮಿ, ಮೂರ್ತಿ ಎಂಬುವರಿಗೆ ಗುಂಡು ತಗ್ಗುಲಿ ಕಾಲು, ಎದೆ ಭಾಗ, ಕೈ, ಸೇರಿದಂತೆ ಇತರ ಕಡೆ ಗಾಯಗಳಾಗಿವೆ. ತಕ್ಷಣ ಇವರನ್ನು ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲದ ಜನನಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲದೆ ಈ ವೇಳೆ ಚಿರತೆಯೂ ಮೃತಪಟ್ಟಿದೆ. ಆದರೆ ಚಿರತೆ ಯಾವುದರಿಂದ ಮೃತಪಟ್ಟಿದೆ ಎಂಬುದು ಇನ್ನೂ ಖಚಿತವಾಗಿಲ್ಲ.

ತಾಲೂಕಿನ ಮದ್ದೂರು ಗ್ರಾಮದ ಎಲೆಪಿಳ್ಳಾರಿ ದೇವಸ್ಥಾನದ ಹಿಂಭಾಗದಲ್ಲಿ ಮಲ್ಲಿಗೆಹಳ್ಳಿ ಗ್ರಾಮಕ್ಕೆ ಹೋಗುವ ಜಮೀನಿನ ರಸ್ತೆಯ ಬದಿಯ ಗುರುವಾರ ಮಧ್ಯಾಹ್ನ ರೈತರು ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಮುಳ್ಳಿನ ಪೊದೆಯಲ್ಲಿ ಚಿರತೆ ಕಾಣಿಸಿಕೊಂಡಿರುವುದನ್ನು ನೋಡಿ ಅರಣ್ಯ ಇಲಾಖೆಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿದಿದ್ದಾರೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಓಡಿಸುವ ಸಲುವಾಗಿ ಕಾರ್ಯಾಚರಣೆ ಮಾಡಲು ತಮ್ಮ ಬಂದೂಕಿನಿದ ಗುಂಡನ್ನು ಹಾರಿಸಿದಾಗ ರೈತರಿಗೆ ಅದು ತಗುಲಿದೆ.

ಚಿರತೆ ಸಾವಿನ ಸುತ್ತ ಅನುಮಾನದ ಹುತ್ತ: ಚಿರತೆಯು ಅರಣ್ಯ ಇಲಾಖೆಯವರು ಹಾರಿಸಿದ ಗುಂಡಿನಿಂದ ಅಥವಾ ಸ್ವರಕ್ಷಣೆಗಾಗಿ ಚಿರತೆ ಮೇಲೆ ಸಿಬ್ಬಂದಿ ದೊಣ್ಣೆಯಿಂದ ಹೊಡೆದಿದ್ದರಿಂದ ಮೃತಪಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಬಗ್ಗೆ ದೂರವಾಣಿ ಮೂಲಕ ಯಳಂದೂರು ಆರ್‌ಎಫ್‌ಒ ನಾಗೇಂದ್ರನಾಯಕ್ ಅವರಿಗೆ ಕರೆ ಮಾಡಿ ಕೇಳಿದಾಗ ‘ಚಿರತೆ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿದ ಪರಿಣಾಮ ನಾಲ್ವರು ರೈತರು ಗಾಯಗೊಂಡಿದ್ದಾರೆ. ಈ ಬಗ್ಗೆ ಯಳಂದೂರು ಸರ್ಕಾರಿ ಆಸ್ಪತ್ರೆಯಲ್ಲಿ ರೈತರಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಸಲಾಗುತ್ತಿದೆ. ಯಾವುದೇ ರೀತಿಯ ದೊಡ್ಡ ಪ್ರಮಾಣದಲ್ಲಿ ಅಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆ ವೇಳೆ ಚಿರತೆಯೂ ಮೃತಪಟ್ಟಿದೆ. ಅದು ವಯೋಸಹಜವಾಗಿ ಮೃತಪಟ್ಟಿದೆಯೇ ಎಂಬುದು ಗೊತ್ತಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ತಿಳಿಸಿದರು.

ಆದರೆ ಈ ಬಗ್ಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ರೈತರು ಗಾಯಗೊಂಡಿರುವುದು ಹಾಗೂ ಚಿರತೆ ಮೃತಪಟ್ಟಿರುವ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net