ಸುಲಿಗೆಗೆ ನಿಂತಿದ್ದ ನಾಲ್ವರು ನಕಲಿ ಅಧಿಕಾರಿಗಳ ಬಂಧನ

Fake-document-fir
Published on

ಚನ್ನಪಟ್ಟಣ: 

ಭ್ರಷ್ಟಾಚಾರ ವಿರೋಧಿ ಹಾಗೂ ಮಾನವ ಹಕ್ಕುಗಳ ಪ್ರತಿಷ್ಟಾನ ಇಲಾಖೆಯ ಅಧಿಕಾರಿಗಳು ಹಾಗೂ ಪತ್ರಕರ್ತರು ಎಂದು ನಕಲಿ ಗುರುತಿನಪತ್ರಗಳನ್ನು ತೋರಿಸಿ, ಜನರನ್ನು ಎದುರಿಸುತ್ತಿದ್ದ‌ ಮಹಿಳೆ ಸೇರಿದಂತೆ ನಾಲ್ಕು ಮಂದಿಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ತಾಲೂಕಿನ ಸಿಂಗರಾಜಪುರ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ತುಂಗಾನಗರದ ಅರ್ಚನಾ, ಶಿವನಗರದ ರವಿಶಂಕರ್, ಹೊಸಗುಡ್ಡದಹಳ್ಳಿ ನಿವಾಸಿ ವಿಶ್ವನಾಥ್ ರಾಜೇ ಅರಸ್ ಹಾಗೂ ಕಾರು ಚಾಲಕ ರೋಹಿತ್ ಆರೋಪಿಗಳು. ಗ್ರಾಮದ ಎರಡು ಮೆಡಿಕಲ್ ಸ್ಟೋರ್ ಗಳಲ್ಲಿ ಈ ನಾಲ್ವರು ಅಧಿಕಾರಿ ಹಾಗೂ ಪತ್ರಕರ್ತರ ಸೋಗಿನಲ್ಲಿ ಅಂಗಡಿ ಮಾಲೀಕರಿಂದ ಹಣ ವಸೂಲಿ ಮಾಡುವ ವೇಳೆ ಇವರುಗಳನ್ನು ಪೊಲೀಸರಿಗೆ ಹಿಡಿದುಕೊಡಲಾಗಿದೆ.

ಹಣ ಪೀಕಿದ್ದರು!!!

ಈ ನಾಲ್ಕು ಮಂದಿ ಮೊದಲಿಗೆ ಗ್ರಾಮದಲ್ಲಿರುವ ಸಂಜು ಮೆಡಿಕಲ್ ಸ್ಟೋರ್ ಗೆ ತೆರಳಿ ನಾವುಗಳು ಭ್ರಷ್ಟಾಚಾರ ವಿರೋಧಿ ಹಾಗೂ ಮಾನವ ಹಕ್ಕುಗಳ ಪ್ರತಿಷ್ಟಾನ ಇಲಾಖೆಯ ಅಧಿಕಾರಿಗಳು ಎಂದು ಗುರುತುಪತ್ರ ತೋರಿಸಿದ್ದಾರೆ. ತದನಂತರ ಅಂಗಡಿಯ ಅನುಮತಿ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ತೋರಿಸಲು ಹೇಳಿದ್ದಾರೆ. ಸೂಕ್ತ ದಾಖಲೆಗಳು ಇಲ್ಲ ಎಂಬುದು ಖಚಿತವಾದ ಮೇಲೆ 15 ಸಾವಿರ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಇಲ್ಲವಾದರೆ, ಪ್ರಕರಣ ದಾಖಲಿಸುವ ಬೆದರಿಕೆ ಹಾಕಿದ್ದಾರೆ. ಅಂಗಡಿಯ ಮಾಲೀಕ ಸದ್ಯ ಹಣ ಇಲ್ಲ ಎಂದು ಅವಲತ್ತುಕೊಂಡಾಗ ಸದ್ಯಕ್ಕೆ ಇರುವಷ್ಟು ಕೊಡು ಎಂದು 2500 ರೂ ಹಣ ಪಡೆದಿದ್ದಾರೆ‌. ಬಳಿಕ 10 ಸಾವಿರ ರೂ ಖಾತೆಗೆ ಹಾಕುವಂತೆ ತಾಕೀತು ಮಾಡಿ ಅಲ್ಲಿಂದ ತೆರಳಿದ್ದಾರೆ.

ಬಳಿಕ ಗ್ರಾಮದಲ್ಲಿರುವ ಮತ್ತೊಂದು ಮೆಡಿಕಲ್ ಸ್ಟೋರ್ ಗೂ ತೆರಳಿ ಅಲ್ಲಿಯೂ ಅದೇ ಅಧಿಕಾರಿಗಳು ಹಾಗೂ ಪತ್ರಕರ್ತರ ಸೋಗಿನಲ್ಲಿ ಬೆದರಿಸಿದ್ದಾರೆ. ಮಾಲೀಕರನ್ನು ಬೆದರಿಸಿ 5 ಸಾವಿರ ಹಣ ಕೀಳಲು ಯತ್ನಿಸಿದ್ದಾರೆ. ಗ್ರಾಮದ ಇವರ ನಕಲಿ ತನಿಖೆಯ ಬಗ್ಗೆ ಅನುಮಾನಗೊಂಡ ಕೆಲ ಗ್ರಾಮಸ್ಥರು ಇವರುಗಳನ್ನು ಪ್ರಶ್ನಿದ್ದಾಗ ಸೂಕ್ತ ಉತ್ತರ ಕೊಡಲು ವಿಫಲರಾಗಿ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಗ್ರಾಮಸ್ಥರು ಅವರನ್ನು ಹಿಡಿದು ಅಕ್ಕೂರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಂಜು ಮೆಡಿಕಲ್ ಸ್ಟೋರಿನ ಮಾಲೀಕ ಸಂಜಯ್ ಈ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಂಧಿತ ನಾಲ್ಕು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net