

ಶಿಗ್ಗಾಂವಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದು ನಾಲ್ವರು ಸಾವಿಗೀಡಾದ ದಾರುಣ ಘಟನೆ ಶಿಗ್ಗಾಂವಿ-ಸವಣೂರ ರಸ್ತೆಯ ಹನುಮರಹಳ್ಳಿ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ಸವಣೂರು ತಾಲೂಕಿನ ಬೇವಿನಹಳ್ಳಿ ಗ್ರಾಮದ ನೀಲಪ್ಪ ಮೂಲಿಮನಿ (23), ಸುದೀಪ ಕೋಟಿ (19) ಸ್ಥಳದಲ್ಲೇ ಮೃತಪಟ್ಟರೆ, ಚಾಲಕ ಕಲ್ಮೇಶ ಮಾನೋಜಿ (25), ಶಿವನಗೌಡ ಯಲ್ಲನಗೌಡ (18) ಹುಬ್ಬಳ್ಳಿ ಕಿಮ್ಸ್‌ನಲ್ಲಿ ಮೃತಪಟ್ಟಿದ್ದಾರೆ. ಮೂವರು ಗಾಯಾಳುಗಳಿಗೆ ಕಿಮ್ಸ್‌ನಲ್ಲಿ ಉಪಚಾರ ನಡೆದಿದೆ. ಬೇವಿನಹಳ್ಳಿ ಗ್ರಾಮದ ಯುವಕರು ಬೆಳಗಾವಿ ಜಿಲ್ಲೆ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣನ ಹುತಾತ್ಮ ಸ್ಥಳ ವೀಕ್ಷಣೆಗೆಂದು ಹೊರಟಿದ್ದರು. ಮರಕ್ಕೆ ಡಿಕ್ಕಿ ಹೊಡೆದ ಕಾರು ಉರುಳಿ ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದೆ. ಸ್ಥಳೀಯರಿಂದ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗಾಯಾಳುಗಳಿಗೆ ಶಿಗ್ಗಾಂವಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿಗೆ ಕರೆದೊಯ್ದರು. ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.