ತುಂಗಭದ್ರಾ ನದಿಯಲ್ಲಿ ನಾಲ್ಕೂ ಮೃತದೇಹಗಳ ಪತ್ತೆ

MUNDARAGI
Published on

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಸೇತುವೆ ಮೇಲಿಂದ ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ನದಿಗೆ ಜಿಗಿದು ವ್ಯಕ್ತ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಗುರುವಾರ ಬೆಳಗಿನ ಜಾವ ಶೋಧ ಕಾರ್ಯ ನಡೆಸಿ ಮೂವರ ಮೃತದೇಹವನ್ನು ಹೊರತೆಗೆದಿದ್ದಾರೆ.

ಕೊರ್ಲಹಳ್ಳಿ ಸೇತುವೆಯಿಂದ ನದಿ ಹರಿಯು ಭಾಗಕ್ಕೆ ಸುಮಾರು ಒಂದೂವರೆಯಿಂದ ಎರಡು ಕಿ.ಮೀ.ದೂರದಲ್ಲಿ ಅಲ್ಲೊಂದು ಇಲ್ಲೊಂದು ಕಾಣುವಂತೆ ಶವಗಳು ತೇಲುತ್ತಿದ್ದವು. ಮಂಜುನಾಥ (41) ಹಾಗೂ ಆತನ ಮಕ್ಕಳಾದ ಪವನ (4), ಧನ್ಯಾ (5) ಅವರ ಶವವನ್ನು ಹೊರತೆಗೆಯಲಾಗಿದೆ. ಮಂಜುನಾಥನ ಭಾಮೈದನ ಮಗ ವೇದಾಂತ (3)ನ ಶವವನ್ನು ಬುಧವಾರ ಸಂಜೆಯೇ ಪತ್ತೆಯಾಗಿತ್ತು.

ಮಕ್ಕಳ ಹಾಗೂ ಮಂಜುನಾಥನ ಶವವನ್ನು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಯಿತು. ಕುಟುಂಬಸ್ಥರ ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಏನೂ ಅರಿಯದ ಕಂದಮ್ಮಗಳನ್ನು ಬಲವಂತದಿಂದ ಕರೆದೊಯ್ದು ನದಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥನ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪುಟ್ಟ ಕಂದಮ್ಮಗಳನ್ನು ಕಳೆದುಕೊಂಡ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ.

ಘಟನೆ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕೂ ಮೃತದೇಹಗಳ ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಶವಗಳನ್ನು ಹಸ್ತಾಂತರಿಸಲಾಗುತ್ತದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಳ್ಳುತ್ತಾರೆ. ಎರ‌್ರಿಸ್ವಾಮಿ ಪಿ.ಎಸ್, ತಹಸೀಲ್ದಾರ್ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net