

ಶಿವಮೊಗ್ಗ: ಮಹಾನಗರ ಪಾಲಿಕೆ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ದಸರಾವನ್ನು ಅ.20ರಿಂದ ನಾಲ್ಕು ದಿನ ವೈಭವದಿಂದ ಆಚರಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಇ. ವಿಶ್ವಾಸ್ ತಿಳಿಸಿದರು.
20ರ ಸಂಜೆ 5ರಿಂದ ರಾತ್ರಿ 9.30ರವರೆಗೆ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್ ಸುಂದರರಾಜ್ ನೇತೃತ್ವದಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಕವಿಗೋಷ್ಠಿ ನಡೆಯಲಿದ್ದು, ಖ್ಯಾತ ವಕೀಲ ಎಂ.ಆರ್.ಸತ್ಯನಾರಾಯಣ ಉದ್ಘಾಟಿಸುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅ.22ರ ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ನಡೆಯುವ ನಾಟ್ಯ ವೈವಿಧ್ಯ ಹಾಗೂ ಸಂಗೀತ ಸಂಭ್ರಮ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ಅಜೇಯ್ ರಾವ್ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ನಂತರ ಪ್ರಹ್ಲಾದ್ ದೀಕ್ಷಿತ್ ನೇತೃತ್ವದಲ್ಲಿ ರಾಗರಂಜಿನಿ ತಂಡದಿಂದ ಸಂಗೀತ ಸಂಭ್ರಮ ಹಾಗೂ ಸ್ಥಳೀಯ ನೃತ್ಯ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಅ.23ರ ಸಂಜೆ 5.30ಕ್ಕೆ ಫ್ರೀಡಂಪಾರ್ಕ್‌ನಲ್ಲಿ ಸಂಗೀತ ಹಾಗೂ ಜಾನಪದ ವೈಭವ ಕಾರ್ಯಕ್ರಮವನ್ನು ಚಿತ್ರನಟ ವಿಜಯ ರಾಘವೇಂದ್ರ ಉದ್ಘಾಟಿಸಲಿದ್ದು, ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸೇರಿ ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ನಂತರ ಜೋಗಿ ಸುನೀತಾ ಮಂಗಳಾ ರವಿ ಹಾಗೂ ಕಲಾತ್ಮಕ ತಂಡದವರಿಂದ ಸಂಗೀತ ವೈಭವ ಮತ್ತು ನಾಗರಾಜ್‌ಮೂರ್ತಿ ತಂಡದವರಿಂದ ಜಾನಪದ ವೈಭವ ನಡೆಯಲಿದೆ ಎಂದರು.
ಸಂಜೆ 5ರಿಂದ ರಾತ್ರಿ 10ರವರೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷ ದಸರಾ ನಡೆಯಲಿದ್ದು, ಶಿವಮೊಗ್ಗದ ಯಕ್ಷ ಸಂವರ್ಧನಾದ ಕಾರ್ಯದರ್ಶಿ ಶ್ರೀನಿವಾಸ ಆಚಾರ್ ಉದ್ಘಾಟಿಸುವರು. ಉಪಮೇಯರ್ ಲಕ್ಷ್ಮೀ ಶಂಕರ ನಾಯ್ಕ ಅಧ್ಯಕ್ಷತೆ ವಹಿಸುವರು. ಯಕ್ಷ ಸಂವರ್ಧನಾ ತಂಡದವರಿಂದ ಲಕ್ಷ್ಮೀ ವಿವಾಹ ಹಾಗೂ ಮಹಾ ಗಣಪತಿ ಯಕ್ಷ ಕಲಾ ಬಳಗದವರಿಂದ ಬಲರಾಮ ಗರ್ವಭಂಗ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಅ.24ರಂದು ಸಂಜೆ 5 ಗಂಟೆಗೆ ಫ್ರೀಡಂಪಾರ್ಕ್‌ನಲ್ಲಿ ಶಂಕರ್ ಶ್ಯಾನಭಾಗ್ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದರು. ಶಾಸಕ ಎಸ್.ಎನ್.ಚನ್ನಬಸಪ್ಪ, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ಸಮಿತಿ ಸದಸ್ಯ ಕಾರ್ಯದರ್ಶಿ ಸಿ.ಆರ್.ಸಿದ್ದಪ್ಪ ಇದ್ದರು.