ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರದಾಟ

27 KAMPLI 02 (NAGANAGOUDA M.A.)
ಎಂ.ಎ.ನಾಗನಗೌಡ
Published on

ಕಂಪ್ಲಿ: ತಾಂತ್ರಿಕ ತೊಂದರೆಯಿಂದಾಗಿ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗೆ ನಾಲ್ಕು ತಿಂಗಳಿಂದ ಸಂಬಳವಾಗಿಲ್ಲ. ದಸರಾ ಹಬ್ಬವನ್ನು ನಿಸ್ಸಾರವಾಗಿ ಆಚರಿಸಿರುವ ಬೋಧಕ-ಬೋಧಕೇತರ ಸಿಬ್ಬಂದಿಗೆ ದೀಪಾವಳಿ ಹೇಗೆ ಎಂಬ ಚಿಂತೆ ಕಾಡುತ್ತಿದೆ.

ಇದನ್ನೂ ಓದಿ: http://ಸಂಬಳ

ತಾಲೂಕಿನ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ(ಎಚ್‌ಆರ್‌ಎಂಎಸ್)ಯನ್ನು ವಿಜಯನಗರ ಜಿಲ್ಲೆಯಿಂದ ಬೇರ್ಪಡಿಸಿ, ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿಗೆ ಸೇರ್ಪಡೆಗೊಳಿಸಲಾಯಿತು. ತಾಲೂಕಿನಲ್ಲಿ ಬಿಇಒ ಕಚೇರಿ ಇಲ್ಲದ್ದರಿಂದ ಕುರುಗೋಡುಗೆ ವರ್ಗಾಯಿಸಲಾಯಿತು.

ಆದರೆ, ಶಿಕ್ಷಕರ ಸಂಬಳ ಅನುದಾನ ಹೊಸಪೇಟೆ ತಾಪಂಗೆ ಬಂದಿತು. ಕುರುಗೋಡಿನಲ್ಲಿ ಅನುದಾನ ಇಲ್ಲದೆ, ಶಿಕ್ಷಕರ ಸಂಬಳ ಆಗಲಿಲ್ಲ. ಕಂಪ್ಲಿ ತಾಲೂಕಿನ ಶಿಕ್ಷಕರ ಎಚ್‌ಆರ್‌ಎಂಎಸ್ ಕುರುಗೋಡುಗೆ ಸೇರಿಸುವ ಮುನ್ನ ಅನುದಾನ ಕುರುಗೋಡಿಗೆ ವರ್ಗಾಯಿಸಿರಲಿಲ್ಲ. ಈ ತಾಂತ್ರಿಕ ತೊಂದರೆಯಿಂದಾಗಿ ತಾಲೂಕಿನ ಒಟ್ಟಾರೆ 242 ಜನ ಬೋಧಕ, ಬೋಧಕೇತರರಿಗೆ ವೇತನ ಪಾವತಿಗೆ ಸಮಸ್ಯೆಯಾಗಿದ್ದು, 2024ರ ಜುಲೈನಿಂದ ಸಂಬಳವಾಗದೆ ಪರಿತಪಿಸುತ್ತಿದ್ದಾರೆ.

ಮುಖ್ಯಶಿಕ್ಷಕರು ಮನೆ ಖರ್ಚಿನ ಜತೆಗೆ ಬಿಸಿಯೂಟ, ಶಾಲಾ ಖರ್ಚುವೆಚ್ಚ ನಿಭಾಯಿಸಬೇಕಾಗಿದೆ. ಮೇಲಾಗಿ ಶಾಲಾ ಅನುದಾನ ಬಿಡುಗಡೆಗೊಂಡಿಲ್ಲ. ಮನೆಯ ನಿತ್ಯ ಖರ್ಚುವೆಚ್ಚ, ಕಿರಾಣಿ, ಇಂಧನ, ಬ್ಯಾಂಕ್ ಇಎಂಐ ಕಟ್ಟಲಾಗದೆ ಹೈರಾಣಾಗಿದ್ದೇವೆ.

ಕಂಪ್ಲಿ ತಾಲೂಕಿನಲ್ಲಿ ಬಿಇಒ ಕಚೇರಿ ಆರಂಭಗೊಳ್ಳುವತನಕ ಕುರುಗೋಡು ಬಿಇಒಗೆ ಎಚ್‌ಆರ್‌ಎಂಎಸ್ ವರ್ಗಕ್ಕೆ ಶಿಕ್ಷಕ ಸಂಘಟನೆಗಳು ಒಪ್ಪಬಾರದಾಗಿತ್ತು. ದೀಪಾವಳಿ ಹೊತ್ತಿಗಾದರೂ ಸಂಬಳ ಬಂದರೆ ಬೆಳಕಿನ ಹಬ್ಬ, ಇಲ್ಲದಿದ್ದರೆ ಕತ್ತಲಲ್ಲಿ ಹಬ್ಬ ಆಚರಿಸುವಂತಾಗಿದೆ. ದೀಪಾವಳಿಯಲ್ಲಿ ಮಕ್ಕಳ ಸಂತೋಷಕ್ಕಾಗಿಯಾದರೂ ಸಾಲಕ್ಕಾಗಿ ಕೈಚಾಚುವಂತಾಗಿದೆ ಎಂದು ಹೆಸರೇಳಲಿಚ್ಛಿಸದ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

ಸದ್ಯ ಆರ್ಥಿಕ ಇಲಾಖೆ ಮುಂದೆ ಶಿಕ್ಷಕರ ಸಂಬಳದ ಕಡತ ಇದ್ದು, ದೀಪಾವಳಿಗೆ ಸಂಬಳ ಆಗುವ ಲಕ್ಷಣ ಕಾಣುತ್ತಿಲ್ಲ. ಕುರುಗೋಡಿನ ಶಿಕ್ಷಕರ ಅನುದಾನ ಮಂಜೂರಾಗಿದ್ದು, ಕುರುಗೋಡು ಶಿಕ್ಷಕರಿಗೆ ಸಂಬಳ ವಿತರಿಸಿಯೂ, ಉಳಿದ ಹಣದಲ್ಲಿ ಕಂಪ್ಲಿ ಶಿಕ್ಷಕರಿಗೆ ಎರಡು ತಿಂಗಳ ಸಂಬಳ ನೀಡಬಹುದು. ತಾತ್ಕಾಲಿಕ ಪರಿಹಾರವಾಗಿ ದೀಪಾವಳಿ ಹಬ್ಬಕ್ಕೆ ಎರಡು ತಿಂಗಳ ಸಂಬಳ ಮಂಜೂರು ಮಾಡುವಲ್ಲಿ ಕುರುಗೋಡು ಅಧಿಕಾರಿಗಳು ಮುಂದಾಗಬೇಕು. ನಾಗನಗೌಡ ಎಂ.ಎ., ರಾಜ್ಯ ಸಂಘಟನಾ ಕಾರ್ಯದರ್ಶಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕಂಪ್ಲಿ ಆರ್ಥಿಕ ಇಲಾಖೆಯಿಂದ ಶೀಘ್ರದಲ್ಲಿಯೇ ಕುರುಗೋಡು ತಾಪಂಗೆ ಅನುದಾನ ಜಮೆ ಆಗಲಿದೆ. ದೀಪಾವಳಿ ಹಬ್ಬದ ಹೊತ್ತಿಗೆ ಶಿಕ್ಷಕರಿಗೆ ಸಂಬಳ ವಿತರಿಸಲಾಗುವುದು. ಟಿ.ಎಂ.ಸಿದ್ದಲಿಂಗಮೂರ್ತಿ ಬಿಇಒ, ಕುರುಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net