ಪಾಳು ಬಿದ್ದಿವೆ ನಾಲ್ಕು ಕಟ್ಟಡ, 3 ದಶಕಗಳ ಹಿಂದೆ ವಿಶ್ವ ಆರಾಧನಾ ಯೋಜನೆಯಡಿ ನಿರ್ಮಾಣ

A-11-KNDPHOTO-1E
Published on

ಕುಂದಾಣ: ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆ ಪ್ರೋತ್ಸಾಹಿಸಲು 1990-91ನೇ ಸಾಲಿನಲ್ಲಿ ವಿಶ್ವ ಆರಾಧನಾ ಯೋಜನೆಯಡಿ ವಿಶ್ವನಾಥಪುರದಲ್ಲಿ ನಿರ್ಮಾಣವಾಗಿದ್ದ 2 ಕಟ್ಟಡಗಳು ಸಂಪೂರ್ಣ ಪಾಳುಬಿದ್ದಿವೆ. ಇದಲ್ಲದೆ ಹಳೇ ಪೊಲೀಸ್ ಠಾಣೆ ಮತ್ತು ಕೃಷಿ ಇಲಾಖೆ ಕಚೇರಿಗಳೂ ಬಳಕೆಗೆ ಯೋಗ್ಯವಿಲ್ಲದಂತಾಗಿವೆ.

ಕಟ್ಟಡಗಳ ಜಾಗ ಕಂದಾಯ ಇಲಾಖೆ ಸುಪರ್ದಿನಲ್ಲಿದ್ದರೆ, ಕಟ್ಟಡಗಳು ಗ್ರಾಪಂ ಸುಪರ್ದಿನಲ್ಲಿವೆ. ಆದರೂ ಇವುಗಳಿಗೆ ಕಾಯಕಲ್ಪದ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.

ನಾಲ್ಕೈದು ವರ್ಷವಷ್ಟೇ ಬಳಕೆ: ನಿರ್ಮಾಣಗೊಂಡ ನಾಲ್ಕೈದು ವರ್ಷಗಳವರೆಗೆ ಎರಡು ಕಟ್ಟಡಗಳಲ್ಲಿ ವಿಕಾಸ ಗ್ರಾಮೀಣ ಅಂಗವಿಕಲರ ಪುನಶ್ಚೇತನ ಯೋಜನೆ ಎಬಲಿಟೀಸ್ ಎಂಬ ಖಾಸಗಿ ಸಂಸ್ಥೆ ಅಂಗವಿಕಲರಿಗೆ ಸ್ವ ಉದ್ಯೋಗ ತರಬೇತಿ ನಡೆಸುತ್ತಿತ್ತು. ಸರ್ಕಾರದ ವಿವಿಧ ಇಲಾಖೆಗಳಿಂದಲೂ ಈ ಕಟ್ಟಡಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಕ್ರಮೇಣ ಕಾರ್ಯಕ್ರಮಗಳು ಹಾಗೂ ತರಬೇತಿಗಳ ಆಯೋಜನೆ ಕಡಿಮೆಯಾಗುತ್ತಲೇ ಬಂದಿತು. ಆ ನಂತರದಲ್ಲಿ ಈ ಕಟ್ಟಡಗಳು ಪಾಳು ಬಿದ್ದಿವೆ. ಬಾಗಿಲುಗಳೆಲ್ಲವೂ ತುಕ್ಕುಹಿಡಿದು ಹಾಳಾಗಿವೆ.

ರಾಷ್ಟ್ರೀಯ ಹೆದ್ದಾರಿ 207ರ ಪಕ್ಕದಲ್ಲೇ ಇರುವ ಈ ಎರಡು ಕಟ್ಟಡಗಳಿಗೆ ಹೊಂದಿಕೊಂಡಂತೆ ವಿಶ್ವನಾಥಪಪುರದ ಹಳೇ ಪೊಲೀಸ್ ಠಾಣೆ ಕಟ್ಟಡ ಕೂಡ ಶಿಥಿಲಾವಸ್ಥೆ ತಲುಪಿದ್ದು, ಸಂಪೂರ್ಣ ನಿರುಪಯುಕ್ತವಾಗಿದೆ. ಕೃಷಿ ಇಲಾಖೆಯ ಕಟ್ಟಡ ಕೂಡ ಬಳಕೆಯೋಗ್ಯವಾಗದಂತೆ ಆಗಿದೆ.

ದುರಸ್ತಿಗೊಳಿಸಲು ನಿರಾಸಕ್ತಿ: ವಿಶ್ವನಾಥಪುರ ಗ್ರಾಪಂ ಕಚೇರಿ ಕೂಗಳತೆ ದೂರದಲ್ಲೇ ಈ ಕಟ್ಟಡಗಳು ಇವೆ. ಜನಪ್ರತಿನಿಧಿಗಳು ದಿನವೂ ಇವುಗಳ ಮುಂದೆ ಹೋಗುತ್ತಾರೆ. ಆದರೆ, ಇದನ್ನು ದುರಸ್ತಿಗೊಳಿಸುವ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇತ್ತ ಗ್ರಾಪಂ ಕೂಡ ಗಮನಹರಿಸಿಲ್ಲ.

ಇಪ್ಪತ್ತೈದು ವರ್ಷಗಳಿಂದ ಉಪಯೋಗಿಸದಿರುವುದರಿಂದ ಈ ಕಟ್ಟಡಗಳು ಸಂಪೂರ್ಣ ಪಾಳುಬಿದ್ದಿವೆ. ಈ ಕಟ್ಟಡಗಳನ್ನು ಗ್ರಾಪಂ ವಶಕ್ಕೆ ಕೊಟ್ಟರೆ ಅವನ್ನು ದುರಸ್ತಿಗೊಳಿಸಿ ಜನರಿಗೆ ಅನುಕೂಲವಾಗುವಂತೆ ಮಾಡಬಹುದು. ಮುನಿವೆಂಕಟಪ್ಪ, ವಿಶ್ವನಾಥಪುರ ಗ್ರಾಮಸ್ಥ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಸರ್ಕಾರಿ ಹಳೇ ಕಟ್ಟಡಗಳು ಇದ್ದರೂ ಪಂಚಾಯಿತಿಗಳೇ ಉಪಯೋಗಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ವಸಂತಕುಮಾರ್, ತಾಪಂ ಇಒ ಹಾಗೂ ವಿಶ್ವನಾಥಪುರ ಗ್ರಾಪಂ ಆಡಳಿತಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net