ನಾಡಿನ ಹಿತಕ್ಕಾಗಿ ದುಡಿದ ಮಹನೀಯರನ್ನು ಸ್ಮರಿಸುವುದು ಅಗತ್ಯ: ಎಡಿಸಿ ಡಾ.ಎಚ್.ಎಲ್.ನಾಗರಾಜು ಅಭಿಮತ

Four book releases Mandya
Published on

ಮಂಡ್ಯ: ನಾಡಿನ ಹಿತಕ್ಕಾಗಿ, ಜನರ ಶ್ರೇಯೋಭಿವೃದ್ಧಿಗಾಗಿ ದುಡಿದ ಸಾಧಕರು, ತ್ಯಾಗಿಗಳು ಹಾಗೂ ಮಹನೀಯರನ್ನು ಇಂದಿನ ಯುವಜನಾಂಗ ಮರೆಯದೆ ಸ್ಮರಿಸುವುದು ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.

ನಗರದ ಗಾಂಧಿಭವನದಲ್ಲಿ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಕುಟುಂಬದಿಂದ ಆಯೋಜಿಸಿದ್ದ ಲೀಲಮ್ಮ ಮತ್ತು ಎಂ.ಕೆ.ಶಿವನಂಜೇಗೌಡ ಸ್ಮಾರಕ 5ನೇ ವರ್ಷದ ಪ್ರಶಸ್ತಿ ಪ್ರದಾನ ಮತ್ತು ನಾಲ್ಕು ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಇಂದಿನ ಯುವಜನಾಂಗ ಹಿರಿಯರನ್ನು ಮರೆಯುತ್ತಿದೆ. ಸಾಧಕರನ್ನು ಸ್ಮರಿಸುವ ಕೆಲಸವನ್ನೂ ಮಾಡುತ್ತಿಲ್ಲ. ಸ್ಮರಿಸುತ್ತಿದ್ದರೂ ಅದು ತೀರಾ ಕಡಿಮೆ ಎಂದು ವಿಷಾದಿಸಿದರು.

ಬೇರು ಇಲ್ಲದೆ ಚಿಗುರು ಇಲ್ಲ. ಹೀಗಾಗಿ ಬೇರಿನ ಮಹತ್ವವನ್ನು ಅರಿಯಬೇಕು. ಚಿಗುರು ಕೂಡ ತಾನು ಬೇರಿನಂತಾಗಬೇಕೆಂಬ ಹಂಬಲ ಹೊಂದಿರಬೇಕು. ನೆಲಮೂಲ ಸಂಸ್ಕೃತಿ ಮತ್ತು ಒಂದು ಪ್ರದೇಶದ ಭೌಗೋಳಿಕತೆಯನ್ನು ಪ್ರತಿನಿಧಿಸಿದ ಪೂರ್ವಿಕರನ್ನು ನಾವು ಸ್ಮರಿಸಬೇಕು. ಹಿರಿಯರು, ಸಾಧಕರನ್ನು ನಮ್ಮ ಮುಂದಿನ ಪೀಳಿಗೆಗಳಿಗೆ ಪರಿಚಯಿಸಬೇಕೇ ಹೊರತು ಅವರನ್ನು ಮರೆತುಬಿಡಲು ಬಿಡಬಾರದು. ಸಾಧಕರ ಹಾದಿಯಲ್ಲೇ ಸಾಗಬೇಕು. ದೇಶವನ್ನು ಸಾಂಸ್ಕೃತಿಕವಾಗಿ ಕಟ್ಟಬೇಕೆಂದು ಕರೆ ನೀಡಿದರು.

ಜಿಲ್ಲೆಯನ್ನು ದಶಕಗಳ ಹಿಂದೆ ಪ್ರತಿನಿಧಿಸಿದ ಜನಪ್ರತಿನಿಧಿಗಳು ಅವರ ಸರಳತೆ, ಪ್ರಾಮಾಣಿಕತೆ, ಅಭಿವೃದ್ಧಿ ಪರ ಚಿಂತನೆಗಳಿಂದಾಗಿ ನನಗೆ ದೇವರಂತೆ ಕಾಣುತ್ತಾರೆ. ಇಂದಿನ ರಾಜಕಾರಣಿಗಳ ಬಗ್ಗೆ ಹೇಳುವುದಾದರೆ ನಾಟ್ ಸೋ ಬ್ಯಾಡ್. ಕೆಲವೆಡೆ ಒಬ್ಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೂಡ ದರ್ಪದಿಂದ ಓಡಾಡುತ್ತಾರೆ. ಅಧಿಕಾರಿಗಳನ್ನು ಹೆದರಿಸುವ ಪ್ರಯತ್ನ ಮಾಡುತ್ತಾರೆ. ಇದನ್ನು ಯಾವುದೇ ಮುಜುಗರ, ಭಯ, ಅಂಜಿಕೆ, ಸಂಕೋಚವಿಲ್ಲದೆ ಧೈರ್ಯವಾಗಿ ಹೇಳುತ್ತೇನೆ ಎಂದ ಅವರು, ಇಂದಿನ ಕೆಲವು ರಾಜಕಾರಣಿಗಳ ನೋಡಿದರೆ ಅವರು ನಾಗಾಲೋಟದಲ್ಲಿ ಓಡುತ್ತಿದ್ದಾರೆ ಅನಿಸುತ್ತಿದೆ. ಇದರಿಂದ ಜನರ ಕೈಗೆ ನಿಲುಕದಷ್ಟು ದೂರ ನಿಂತಿದ್ದಾರೆ. ಹಿಂದಿನ ರಾಜಕಾರಣಿಗಳಿಗೂ ಈಗಿನ ರಾಜಕಾರಣಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂದರು.

ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್, ಎಂ.ಬಿ.ರಮೇಶ್, ಎಂ.ಎಸ್.ಸತ್ಯಾನಂದ, ಗುರು ಆತ್ಮಾನಂದ ಇತರರಿದ್ದರು.

ಮಂಡ್ಯದ ಕಾಳನಾಯಕ ಕೆಂಪೇಗೌಡರ ಮನೆತನ ಕುರಿತಾದ ಡಾ.ಪ್ರದೀಪ್‌ಕುಮಾರ್ ಹೆಬ್ರಿ ರಚನೆಯ 700 ಪುಟಗಳ ಬೃಹತ್ ಕೃತಿ ಅಜಾತ ಶತ್ರು ಹಾಗೂ ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರು ಸುಮಾರು 15 ವರ್ಷದಿಂದ ಸಂಗ್ರಹಿಸಿದ ಚಿಂತನಾ ಬರಹಗಳ ಸಂಪಾದನಾ ಕೃತಿಗಳಾದ ಸುಭಾಷಿತ, ವಿಚಾರ ವಿನಿಮಯ ಹಾಗೂ ಆತ್ಮದೀಪ ಕೃತಿಗಳನ್ನು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಅವರು ಲೋಕಾರ್ಪಣೆ ಮಾಡಿದರು.

ಇದೇ ವೇಳೆ ಕನ್ನಿಕಾಶಿಲ್ಪ ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥೆ ಡಾ.ಎಚ್.ಆರ್.ಕನ್ನಿಕಾ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಹೊಳಲು ರಾಘವೇಂದ್ರ, ಮಂಡ್ಯ ಚೆಸ್ ಅಕಾಡೆಮಿ ಸಹ ಸಂಸ್ಥಾಪಕಿ ಮಾಧುರಿ ಜೈನ್, ಗಾಯಕ ಕಾರಸವಾಡಿ ಸತೀಶ್, ವಿಶೇಷಚೇತನ ಗಾಯಕಿ ಡಾ.ಎಂ.ಬಿ.ಮಾಲಾ, ಮಿಮ್ಸ್ ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಚ.ಮ.ಉಮೇಶ್‌ಬಾಬು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net