ಆತ್ಮಹತ್ಯೆ ಪ್ರಕರಣದಲ್ಲಿ ನಾಲ್ವರ ಬಂಧನ

IMG20250711142114.jpg
Published on

ಬೆಳಗಾವಿ: ನಗರದ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಬಾಗದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ನಾಲ್ವರನ್ನು ಬಂಧಿಸಿ 7.70 ಲಕ್ಷ ರೂ. ನಗದು, 660 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಡಗಾಂವಿ ಕೇಶವ ನಗರದ ರಾಜೇಶ ಕುಡತರಕರ (52), ರೀನಾ ಕುಡತರಕರ (40), ಖಾಸಬಾಗದ ಟೀಚರ್ಸ್ ಕಾಲನಿಯ ಭಾಸ್ಕರ್ ಸೋನಾರ (47), ಶಹಾಪುರದ ಬಿಚ್ಚು ಗಲ್ಲಿಯ ನಾನಾ ಶಿಂಧೆ (35) ಅವರನ್ನು ಬಂಧಿಸಲಾಗಿದೆ. ಮನೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 7.70 ಲಕ್ಷ ರೂ. ನಗದು, 49 ಲಕ್ಷ ರೂ. ಮೌಲ್ಯದ 660 ಗ್ರಾಂ ಚಿನ್ನಾಭರಣ ಸೇರಿ 56.70 ಲಕ್ಷ ರೂ. ಮೌಲ್ಯದ ಸ್ವತ್ತು ಜಪ್ತಿ ಮಾಡಿಕೊಂಡಿದ್ದೇವೆ ಎಂದರು.

ಸಾಲದ ಕಿರುಕುಳ, ಬೆದರಿಕೆ, ಚಿತ್ರಹಿಂಸೆಯಿಂದ ಬೇಸತ್ತು ನಗರದ ಖಾಸಬಾಗದಲ್ಲಿ ಜು.9ರಂದು ಒಂದೇ ಕುಟುಂಬದ ಸಂತೋಷ ಕುರಡೇಕರ (42), ಸುವರ್ಣಾ ಕುರಡೇಕರ (52), ಮಂಗಲ ಕುರಡೇಕರ (80) ವಿಷ ಸೇವಿಸಿ ಮೃತಪಟ್ಟಿದ್ದರು. ಸುನಂದಾ ಕುರಡೇಕರ ತೀವ್ರ ಅಸ್ವಸ್ಥರಾಗಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ನೀಡಿದ ದೂರು, ಆತ್ಮಹತ್ಯೆ ಆಧಾರದ ಮೇಲೆ ತನಿಖೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದ್ದು, ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net