ಹೊಸ ಜಂಬರಘಟ್ಟೆಯಲ್ಲಿ ನಾಲ್ವರ ಬಂಧನ

05 HHR P 06
ಹೊಸ ಜಂಬರಘಟ್ಟೆಯಲ್ಲಿ ಪೊಲೀಸರ ನಿಯೋಜನೆ ಮಾಡಿರುವುದು.
Published on

ಹೊಳೆಹೊನ್ನೂರು: ಸಮೀಪದ ಹೊಸ ಜಂಬರಘಟ್ಟೆಯಲ್ಲಿ ಭಾನುವಾರ ಖಬರ್ ಸ್ಥಾನದಲ್ಲಿ ಅಕೇಶಿಯಾ ಮರ ಕಡಿದ ವಿಚಾರದ ಗಲಾಟೆಯಲ್ಲಿ ಜಾತಿ ನಿಂದನೆ ಆರೋಪದಡಿ ನಾಲ್ವರನ್ನು ಬಂಧಿಸಲಾಗಿದೆ.
ಹೊಸ ಜಂಬರಘಟ್ಟೆಯ ಸಿದ್ದೀಕ್ (32), ಅಲಿಮ್ (27), ನೂರ್ ಅಹಮದ್ (67), ಸಮೀಉಲ್ಲಾ (17) ಬಂಧಿತರು. ಹೊಳೆಹೊನ್ನೂರು ಪೊಲೀಸರು 6-7 ಜನರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಅಕೇಶಿಯಾ ಮರ ಕಡಿದ ರವಿ ಮನೆ ಮುಂಭಾಗ ಮತ್ತೆ ಸೋಮವಾರ ಬೆಳಗ್ಗೆ ಹೋಗಿ ಗಲಭೆ ಮಾಡಿದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ ಪೊಲೀಸರು ನೋಟಿಸ್ ನೀಡಿ ಕಳುಹಿಸಿದ್ದಾರೆ. ಅಕೇಶಿಯಾ ತುಂಡನ್ನು ಹೊಸ ಜಂಬರಘಟ್ಟಯ ಮಸೀದಿ ಮುಂಭಾಗ ಇರಿಸಲಾಗಿದೆ. ಸದ್ಯ ಗ್ರಾಮದಲ್ಲಿ ವಾತಾವರಣ ಶಾಂತವಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇತ್ತು. ಗ್ರಾಮಸ್ಥರ ಓಡಾಟ ತಗ್ಗಿತ್ತು. ಆದರೆ ಅಂಗಡಿ ಮುಂಗಟ್ಟುಗಳು ಮಾಮೂಲಿಯಾಗಿ ತೆರೆದಿದವು. ಕೃಷಿ ಕೆಲಸಕ್ಕೆ ಯಾರೊಬ್ಬರು ತೆರಳಲಿಲ್ಲ. ಪುಟ್ಟ ಗ್ರಾಮವಾದ ಹೊಸ ಜಂಬರಘಟ್ಟೆಯಲ್ಲಿ ಎಲ್ಲಿ ನೋಡಿದರೂ ಪೊಲೀಸರೇ ಕಾಣುತ್ತಿದ್ದರು.
ಭಾನುವಾರ ಜಂಬರಘಟ್ಟೆಯ ರವಿ ಎಂಬಾತ ಕುರಿ ಕಟ್ಟಲು ಖಬರ್‌ಸ್ಥಾನದಲ್ಲಿ ಅಕೇಶಿಯಾ ಮರ ಕಡಿದ ಆರೋಪದಲ್ಲಿ ಎರಡು ಕೋಮುಗಳ ಮಧ್ಯೆ ಗಲಾಟೆಯಾಗಿತ್ತು. ಗ್ರಾಮಾಡಳಿತ ಎರಡು ಕಡೆಯವರಿಗೂ ಸುಮ್ಮನಿರುವಂತೆ ಹೇಳಿ ವಿವಾದವನ್ನು ತಣ್ಣಗಾಗಿಸಿತ್ತು. ಆದರೆ ಕೆಲ ಮುಸ್ಲಿಂ ಯುವಕರು ಸಂಜೆ ರವಿ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದರಿಂದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಗ್ರಾಮದ ಕೆಲ ಹಿಂದು ಹೆಣ್ಣು ಮಕ್ಕಳ ಮೇಲೂ ಹಲ್ಲೆಯಾಗಿದೆ ಎನ್ನಲಾಗುತ್ತಿದೆ. ಇಬ್ಬರು ಮಹಿಳೆಯರು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಸದ್ಯ 6 ಜನ ಗಾಯಾಳುಗಳು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸೋಮವಾರ ವಿವಿಧ ಸಮುದಾಯಗಳ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ದಾಖಲಾದವರ ಆರೋಗ್ಯ ವಿಚಾರಿಸಿದರು. ಭದ್ರಾವತಿ ಡಿವೈಎಸ್‌ಪಿ ನಾಗರಾಜ್ ಪರಿಶೀಲನೆ ನಡೆಸಿದರು. ಹೊಳೆಹೊನ್ನೂರು ಸಿಪಿಐ ಲಕ್ಷ್ಮೀಪತಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಜಂಬರಘಟ್ಟೆಯಲ್ಲಿ ಬಂದೊಬಸ್ತ್‌ಗಾಗಿ 2 ಕೆಎಸ್‌ಪಿಆರ್, 2 ಡಿಎಆರ್ ತುಕಡಿಗಳ 120 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net