ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಅಂದರ್

Drugs Smash
Published on

ಕಾಸರಗೋಡು: ಜಿಲ್ಲೆಯಲ್ಲಿ ಪೊಲೀಸ್ ಹಾಗೂ ಅಬಕಾರಿ ದಳ ಪ್ರತ್ಯೇಕವಾಗಿ ನಡೆಸಿರುವ ಕಾರ್ಯಾಚರಣೆಯಲ್ಲಿ ಎಂಡಿಎಂಎ, ಗಾಂಜಾ ಸಾಗಾಟದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತಂಡದ ಒಬ್ಬಾತ ಪರಾರಿಯಾಗಿದ್ದಾನೆ. ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಕಾರು ಮತ್ತು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರ ಠಾಣೆ ಎಸ್.ಐ ಟೋನಿ ಜೆ.ಮಟ್ಟಂ ನೇತೃತ್ವದ ಪೊಲೀಸರ ತಂಡ ಪೊಸೋಟ್ ಎಂಬಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 4.29 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಮಂಜೇಶ್ವರ ಬಡಾಜೆ ನಿವಾಸಿ ಅಭಿಲಾಶ್ ಹಾಗೂ ನೀಲೇಶ್ವರ ತೈಕಡಪ್ಪುರ ನಿವಾಸಿ ಮನಾಸಿರ್ ಇ.ಕೆ ಎಂಬುವರನ್ನು ಬಂಧಿಸಲಾಗಿದೆ. ಮನಾಸಿರ್ ವಿರುದ್ಧ ಗಾಂಜಾ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನೀಲೇಶ್ವರ ಠಾಣೆಯಲ್ಲಿ ಈ ಹಿಂದೆ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಉಪ್ಪಳದ ಖಾಸಗಿ ಆಸ್ಪತ್ರೆ ಸನಿಹ ನಿಲ್ಲಿಸಲಾಗಿದ್ದ ಸ್ಕೂಟರ್ ತಪಾಸಣೆ ನಡೆಸಿದ ಪೊಲೀಸರು 375 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದು, ಹಿದಾಯತ್‌ನಗರ ನಿವಾಸಿ ಸುಹೈಲ್ ಎಂಬಾತನನ್ನು ಬಂಧಿಸಿದ್ದಾರೆ. ಈತನ ಜತೆಗಿದ್ದ ಹನೀಫ್ ಎಂಬಾತ ಪರಾರಿಯಾಗಿದ್ದಾನೆ.

ಮಂಗಳೂರಿನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ಕೇರಳ ರಸ್ತೆ ಸಾರಿಗೆ ಬಸ್ಸನ್ನು ವಾಮಂಜೂರಿನಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಸಾಗಿಸುತ್ತಿದ್ದ ಬೆಳ್ತಂಗಡಿ ನಿವಾಸಿ ಅಬ್ದುಲ್ ಹಾಕಿಂ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಾಮಂಜೂರಿನ ಅಬಕಾರಿ ದಳ ಚೆಕ್‌ಪೋಸ್ಟ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net