ಪಂಪ್ ಕಳವು ಮಾಡುತ್ತಿದ್ದ ನಾಲ್ವರ ಸೆರೆ: 11 ಸಬ್‌ಮರ್ಸಿಬಲ್ ಮೋಟಾರ್‌ಗಳು ವಶ

arrested
Published on

ಮೈಸೂರು: ಸರ್ವೀಸ್‌ಗೆ ಕೊಟ್ಟಿದ್ದ ಸಬ್‌ಮರ್ಸಿಬಲ್ ಮೋಟಾರ್‌ಗಳನ್ನು (ಪಂಪ್)ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.


ನೆಹರು ನಗರದ 7ನೇ ಕ್ರಾಸ್ ನಿವಾಸಿ ಜಾಫರ್ ಸಾದೀಕ್ ಅಲಿಯಾಸ್ ಬಾಬ(24), ರಾಘವೇಂದ್ರನಗರ 7ನೇ ಕ್ರಾಸ್‌ನ ಮಹಮ್ಮದ್ ಮೊಹೀದ್ದಿನ್ ಅಲಿಯಾಸ್ ಬಿಹಾರಿ(35), ಭಾರತ್‌ನಗರದ ಅಬ್ದುಲ್ ಜಮೀಲ್ ಅಲಿಯಾಸ್ ಪಿ.ಕೆ(25) ಹಾಗೂ ತನ್ವೀರ್‌ಸೇಠ್ ನಗರ 1ನೇ ಕ್ರಾಸ್‌ನ ನಯಾಜ್ ಖಾನ್ ಅಲಿಯಾಸ್ ಬೆಂಗಳೂರಿ ಬಂಧಿತ ಆರೋಪಿಗಳು.

ಭಾರತ್‌ನಗರದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದ ವೇಳೆ ಇವರು ಸಿಕ್ಕಿ ಬಿದ್ದಿದ್ದಾರೆ.


ಅನುಮಾನದ ಹಿನ್ನೆಲೆಯಲ್ಲಿ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ತಪಾಸಣೆ ಮಾಡಿದ್ದು, ಅದರಲ್ಲಿ 4 ಸಬ್‌ಮರ್ಸಿಬಲ್ ಮೋಟಾರ್ ಕಳ್ಳತನ ಮಾಡಿರುವುದೆಂದು ಪತ್ತೆಯಾಗಿದೆ.

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಬಂಧಿತ ಆರೋಪಿಗಳು, ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 1, ತಿ.ನರಸೀಪುರ ಠಾಣೆಯಲ್ಲಿ 2, ಹುಲ್ಲಹಳ್ಳಿ ಠಾಣೆಯಲ್ಲಿ 3, ಅರಕೆರೆ ಠಾಣೆಯಲ್ಲಿ 1 ಹಾಗೂ ಕವಲಂದೆ ಠಾಣೆ ವ್ಯಾಪ್ತಿಯಲ್ಲಿ 1 ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.


ಬಂಧಿತರಿಂದ 11 ಸಬ್‌ಮರ್ಸಿಬಲ್ ಮೋಟಾರ್‌ಗಳು, 18 ಸಾವಿರ ರೂ.ನಗದು, 1 ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನ, 1 ಅಪೇ ಆಟೋ, ಟಾಟಾ ಇಂಡಿಕಾ ಕಾರ್, ಪ್ಯಾಸೆಂಜರ್ ಆಟೋ ಹಾಗೂ ಕಮರ್ಷಿಯಲ್ ಸಿಲಿಂಡರ್ ಅನ್ನು ಜಪ್ತಿ ಮಾಡಲಾಗಿದೆ.


ಎಎಸ್‌ಪಿ ಎಲ್.ನಾಗೇಶ್ ನೇತೃತ್ವದಲ್ಲಿ ಪಿಐ ಡಾ.ಎಂ.ಎಲ್.ಶೇಖರ್, ಪಿಎಸ್‌ಐ ಕೆ.ಎ.ಚಂದ್ರ, ಎಎಸ್‌ಐ ಸತೀಶ್, ಸಿಬ್ಬಂದಿ ಅಬ್ದುಲ್ ಲತೀಫ್, ಭಾಸ್ಕರ್, ಅಶೋಕ್, ಸಿ.ಕೆ.ಮಹೇಶ್, ವಿಶ್ವನಾಥ್, ಸುನೀಲ್ ಕುಮಾರ್ ಮತ್ತು ಚಾಲಕ ಸಂಜಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net