ಯುವಕನನ್ನು ಕೊಂದ ನಾಲ್ವರ ಬಂಧನ

Bangaluru Rural District- Hosuru Crime
crime-text-logo-brand
Published on

ವರ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು - ಬಾಗಲೂರು ಠಾಣೆ ಪೊಲೀಸರಿಂದ ಮರಣೋತ್ತರ ಪರೀಕ್ಷೆಗೆ ಕೃಷ್ಣಗಿರಿ ವೈದ್ಯಕೀಯ ಕಾಲೇಜಿಗೆ ಮೃತದೇಹ ರವಾನೆ



ಹೊಸೂರು: ಗಣೇಶ ಹಬ್ಬದ ವೇಳೆ ಯುವಕರ ನಡುವೆ ನಡೆದ ಜಗಳದಲ್ಲಿ ಯುವಕನೊಬ್ಬನ ಕೊಲೆಯಾಗಿದೆ. ಸರ್ಜಾಪುರ ಸಮೀಪದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಸೂಳೆಕುಂಟೆ ನಿವಾಸಿ ರೇವಂತ್ ಕುಮಾರ್ (32) ಮೃತ. ಕೊಲೆ ಆರೋಪದ ಮೇರೆಗೆ ಅದೇ ಗ್ರಾಮದ ಪುನೀತ್(27), ಪ್ರವೀಣ್ ಕುಮಾರ್(26), ನವೀನ್(24) ಮತ್ತು ಶಿವಕುಮಾರ್ (28) ಎಂಬುವವರನ್ನು ತಮಿಳುನಾಡಿನ ಬಾಗಲಕುಂಟೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಆನೇಕಲ್ ತಾಲೂಕು ಸರ್ಜಾಪುರ ಸಮೀಪದ ಸೂಳಕುಂಟೆಯಲ್ಲಿ ಗಣೇಶ ಚತುರ್ಥಿಯಂದು ರೇವಂತ್ ಹಾಗೂ ಪುನೀತ್ ತಂಡಗಳ ನಡುವೆ ಜಗಳವಾಗಿತ್ತು. ಇದೇ ದ್ವೇಷಕ್ಕೆ ಪುನೀತ್ ಸೇರಿ ನಾಲ್ವರು ರೇವಂತ್ ನನ್ನು ಕಾರಿನಲ್ಲಿ ಅಪಹರಿಸಿ ಕೊಲೆ ಮಾಡಿ, ನಂತರ ಹೊಸೂರು ಸಮೀಪದ ಕೋಲದಾಸಪುರ ರಸ್ತೆ ಬಳಿ ಎಸೆದಿದ್ದರು.
ಯುವಕನ ಶವ ಪತ್ತೆ ಹಿನ್ನೆಲೆಯಲ್ಲಿ ಸೆ.19ರಂದು ಪ್ರಕರಣ ದಾಖಲಿಸಿಕೊಂಡಿದ್ದ ಹೊಸೂರಿನ ಬಾಗಲೂರು ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೃಷ್ಣಗಿರಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ರವಾನಿಸಿದ್ದರು. ಅಪರಿಚಿತ ಯುವಕ ಶವದ ಬಗ್ಗೆ ಗಡಿಪ್ರದೇಶದ ಎಲ್ಲ ಪೊಲೀಸ್
ಠಾಣೆಗಳಿಗೂ ಮಾಹಿತಿ ನೀಡಿದ್ದರು. ಇದರ ನಡುವೆ, ಯುವಕನ ಪಾಲಕರು ವರ್ತೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪಾಲಕರು ಯುವಕನ ಗುರುತು ಪತ್ತೆ ಮಾಡಿದ್ದರು. ಇದರ ನಡುವೆ, ಆರೋಪಿಗಳು ಹೊಸೂರು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಶರಣಾಗಿದ್ದು, ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ
ದೊಡ್ಡಬಳ್ಳಾಪುರ: ತಾಲೂಕಿನ ಮಾಡೇಶ್ವರ ಹೊರವಲಯದಲ್ಲಿ ಶನಿವಾರ ಮಧ್ಯಾಹ್ನ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾಡೇಶ್ವರದ ಸೋಮಶೇಖರ್ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರ ನಿಖಿಲ್ (25) ಮೃತ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಿಖಿಲ್ ಇತ್ತೀಚೆಗೆ ಕೆಲಸ ಬಿಟ್ಟು ದನ ಮೇಯಿಸುತ್ತಿದ್ದ. ಪಾಲಕರು ಮಗನಿಗೆ ಕೆಲಸಕಕೆ ಹೋಗುವಂತೆ ಬುದ್ಧಿಮಾತು ಹೇಳಿದ್ದರಿಂದ ಮನನೊಂದ ನಿಖಿಲ್ ದನ ಮೇಯಿಸಲು ಹೋಗಿದ್ದಾಗ ಹಗ್ಗದಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ.ಎನ್.ನವೀನ್ ಕುಮಾರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೊಡ್ಡಬೆಳವಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net