ಅನಧಿಕೃತವಾಗಿ ಬೆಟ್ಟಿಂಗ್ ನಾಲ್ವರ ಬಂಧನ

Published on

ಮೈಸೂರು: ಮೈಸೂರು ರೇಸ್ ಕ್ಲಬ್‌ನಲ್ಲಿ ನಡೆಯುವ ಕುದುರೆ ರೇಸ್‌ಗೆ ಅನಧಿಕೃತವಾಗಿ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದ ನಾಲ್ವರನ್ನು ಬಂಧಿಸಿರುವ ನಗರ ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು 7 ಸಾವಿರ ನಗದು, 4 ಮೊಬೈಲ್ ಸೇರಿದಂತೆ ಇನ್ನಿತರ ವಸ್ತು ವಶಪಡಿಸಿಕೊಂಡಿದ್ದಾರೆ.

ಕೆಸರೆ ಒಂದನೇ ಹಂತ, ಕುರಿಮಂಡಿ ಸರ್ಕಲ್ 6ನೇ ಕ್ರಾಸ್ ಮನೆಯೊಂದರಲ್ಲಿ ಮೊಬೈಲ್ ಮೂಲಕ ಸಾರ್ವಜನಿಕರಿಂದ ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಅದೃಷ್ಟದ ಜೂಜಾಟ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ಮಾಡಿದಾಗ ಮೈಸೂರು ರೇಸ್ ಕೋರ್ಸ್‌ನಲ್ಲಿ ನಡೆಯುವ ಕುದುರೆ ಜೂಜಾಟಕ್ಕೆ ಸಮನಾಂತರವಾಗಿ ಅಕ್ರಮವಾಗಿ ಲಾಭಗಳಿಸುವ ಉದ್ದೇಶದಿಂದ ಮೊಬೈಲ್‌ಗಳ ಮುಖಾಂತರ ಕಾನೂನು ಬಾಹಿರವಾಗಿ ಬೆಟ್ಟಿಂಗ್ ಜೂಜಾಟವಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಯಿತು.

ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಸಿಸಿಬಿ ಎಸಿಪಿ ಎಸ್.ಎನ್. ಸಂದೇಶ್‌ಕುಮಾರ್, ಪಿ.ಎಸ್.ಐ ಮಾರುತಿ ಅಂತರಗಟ್ಟಿ, ಸಿಬ್ಬಂದಿ ರಾಮಸ್ವಾಮಿ, ರಾಘವೇಂದ್ರ, ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net