

ಮೈಸೂರು; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುವ ರಾಷ್ಟ್ರ, ರಾಜ್ಯಮಟ್ಟದ ವಿವಿಧ ಪ್ರಶಸ್ತಿಗೆ ಜಿಲ್ಲೆಯ ನಾಲ್ವರು ಸಾಧಕರು ಭಾಜನರಾಗಿದ್ದಾರೆ.
2023-24ನೇ ಸಾಲಿನ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಮೈಸೂರು ಮೂಲದ ಡಾ.ಜಿ.ಎನ್.ನಾಗಮಣಿ ಶ್ರೀನಾಥ್ ಭಾಜನರಾಗಿದ್ದಾರೆ. ಪುರಸ್ಕಾರವು 10 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ಕಲಾ ವಿಭಾಗದಲ್ಲಿ 2022-23ನೇ ಸಾಲಿನ ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಚಿತ್ರಕಲಾವಿದ ಜಿ.ಎಲ್.ಎನ್.ಸಿಂಹ ಭಾಜನರಾಗಿದ್ದು, ಸಂಗೀತ, ನೃತ್ಯ ವಿಭಾಗದಲ್ಲಿ 2022-23ನೇ ಸಾಲಿನ ವೀಣಾವಾದಕಿ, ಆಕಾಶವಾಣಿ, ದೂರದರ್ಶನದ ಎ ಗ್ರೇಡ್ ಕಲಾವಿದೆ ಎಂ.ಕೆ.ಸರಸ್ವತಿ ಅವರು ‘ಶ್ರೀ ನಿಜಗುಣ-ಪುರಂದರ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
ಇದೇ ವಿಭಾಗದಲ್ಲಿ 2023-24ನೇ ಸಾಲಿನ ‘ಕುಮಾರವ್ಯಾಸ ಪ್ರಶಸ್ತಿ’ಗೆ ಗಮಕ ಕಲಾವಿದ ಕೃಷ್ಣಗಿರಿ ರಾಮಚಂದ್ರ ಅವರು ಪುರಸ್ಕೃತರಾಗಿದ್ದಾರೆ. ಈ ರಾಜ್ಯಮಟ್ಟದ ಪ್ರಶಸ್ತಿಗಳು 5 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.
ನಾಟಕ ವಿಭಾಗದಲ್ಲಿ ಮೈಸೂರು ರಂಗಾಯಣದ ಮಾಜಿ ನಿರ್ದೇಶಕ, ರಂಗಕರ್ಮಿ ಸಿ.ಬಸವಲಿಂಗಯ್ಯ ಅವರಿಗೆ 2022-23ನೇ ಬಿ.ವಿ.ಕಾರಂತ ಪ್ರಶಸ್ತಿ ಲಭಿಸಿದೆ. ಜ.31ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಈ ಪ್ರಶಸ್ತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಲಿದ್ದಾರೆ.
ಈಗಾಗಲೇ ಘೋಷಣೆಯಾಗಿರುವ 2020-21ನೇ ಸಾಲಿನ ಪಂಪ ಪ್ರಶಸ್ತಿಯನ್ನು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್, 2021-22ನೇ ಸಾಲಿನ ಜಾನಪದಶ್ರೀ ಪ್ರಶಸ್ತಿಯನ್ನು ಗಾಯಕ ಕುಮಾರಸ್ವಾಮಿ ಅವರಿಗೆ ಇದೇ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ.
ಹಾಸನ ಜಿಲ್ಲೆಯ ಜೋಡಿಗುಬ್ಬಿ ಗ್ರಾಮದಲ್ಲಿ 1950ರ ಏಪ್ರಿಲ್ 7ರಂದು ಜನನ. ಡಾ. ಜಿ.ಎನ್.ನಾಗಮಣಿ ಶ್ರೀನಾಥ್ ಅವರು ಸಂಗೀತ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದೆಯಾಗಿ, ಪ್ರಸಿದ್ಧ ಗಾಯಕಿ, ನಿರ್ದೇಶಕಿ, ಲೇಖಕಿ, ಶಿಕ್ಷಕಿ, ವ್ಯವಸ್ಥಾಪಕಿ, ವಾಗ್ಗೇಯಗಾರ್ತಿ- ಹೀಗೆ ಬಹುಮುಖ ಪ್ರತಿಭಾನ್ವಿತರು. ಮೈಸೂರು ಮಹಾರಾಣಿ ಕಾಲೇಜು, ನಂತರ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇವರು ಚಿತ್ರಕಲಾವಿದರು. 1937ರ ಡಿಸೆಂಬರ್‌ನಲ್ಲಿ 19ರಂದು ಜನನ. ಕಲಾ ಬದುಕು ಪ್ರಾರಂಭವಾದದ್ದು ಮೈಸೂರಿನಲ್ಲಿ. ಬಾಲ್ಯದಿಂದಲೇ ಅವರನ್ನು ವೇದ, ಪುರಾಣಗಳು ಆಕರ್ಷಿಸಿದವು. ಮನೋಜ್ಞವಾದ ಕಲಾಕೃತಿ ರಚಿಸುತ್ತ ತಮ್ಮದೇ ಆದಂತಹ ಪಾರಂಪರಿಕ ಶೈಲಿಯನ್ನು ಹುಟ್ಟು ಹಾಕಿದವರು. ಕಲೆಯಲ್ಲಿ ಅಪಾರ ಆಸಕ್ತಿ ಇದ್ದ ಇವರು ವೇದ, ಸೂಕ್ತಿಗಳನ್ನು ಆಧರಿಸಿ ಸರಣಿ ಚಿತ್ರ ರಚಿಸಿದ್ದಾರೆ.
ಇವರು 1942ರಲ್ಲಿ ಮೈಸೂರಿನಲ್ಲಿ ಜನಿಸಿದರು. ಬೇಲೂರು ಕೃಷ್ಣರಾವ್, ಕೃಷ್ಣಗಿರಿ ಕೃಷ್ಣರಾವ್ ದಂಪತಿ ಪುತ್ರ. ಅವರ ತಂದೆ ಕರ್ನಾಟಕದಲ್ಲಿ ಗಮಕದ ವಿಶಿಷ್ಟ ಕಲಾ ಪ್ರಕಾರವನ್ನು ಪುನರುತ್ಥಾನಗೊಳಿಸಿದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ರಾಮಚಂದ್ರ ಅವರು ರಾಜ್ಯಾದ್ಯಂತ ಗಮಕ ಪ್ರದರ್ಶನ ನೀಡಿದ್ದಾರೆ. ಗಮಕ ಕಲೆಯ ಬಗ್ಗೆ ಅನೇಕ ವಿದ್ವತ್ಪೂರ್ಣ ಲೇಖನ ಬರೆದಿದ್ದಾರೆ.
ವಿದುಷಿ ಎಂ.ಕೆ.ಸರಸ್ವತಿ ಅವರು ವೀಣಾವಾದಕರು. ಆಕಾಶವಾಣಿ, ದೂರದರ್ಶನದ ಎ ಗ್ರೇಡ್ ಕಲಾವಿದೆ. ದೇಶಾದ್ಯಂತ ಸಂಗೀತ ಕಛೇರಿ ನೀಡಿದ್ದಾರೆ. ಸರಸ್ವತಿ ಅವರ ಸಂಗೀತ ಪರಂಪರೆ ಮನೆಯಿಂದ ಬಂದವರು. ಕಮಲಮ್ಮ ಮತ್ತು ಎಂ.ಕೆ.ಶ್ರೀನಿವಾಸ್ ಅಯ್ಯಂಗಾರ್ ದಂಪತಿಯ ಪುತ್ರಿ ಇವರು.