

ಭರಮಸಾಗರ: ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ಕೆರೆಯಲ್ಲಿ ಮೀನಿನ ಸುಗ್ಗಿ ಶುರುವಾಗಿದೆ.
ಹರಿಹರದ ತುಂಗಾಭದ್ರ ನದಿಯಿಂದ ಹರಿದು ಬರುತ್ತಿರುವ ನೀರಿನ ಜತೆ ದೊಡ್ಡ ಗಾತ್ರದ ಮೀನುಗಳು ಬರುತ್ತಿವೆ. ಹೊಳೆಯ ಮೀನು ಹಿಡಿಯಲು ಜನರು ಮುಗಿಬಿದ್ದಿದ್ದಾರೆ.
ದುಮ್ಮುಕ್ಕುತ್ತಿರುವ ನೀರಿನ ಕಾರಂಜಿಯಲ್ಲಿ ಮೀನುಗಳು ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು, ಗ್ರಾಮಸ್ಥರು ಹಳೆಯ ಸೀರೆ, ಬಕೆಟ್, ಬುಟ್ಟಿಗಳನ್ನು ಹಿಡಿದುಕೊಂಡು ಮೀನುಗಳನ್ನು ಸಂಗ್ರಹಿಸುವುದರಲ್ಲಿ ನಿರತರಾಗಿರುವ ದೃಶ್ಯ ಸಾಮಾನ್ಯವಾಗಿದೆ.
ನದಿ ಪಾತ್ರದಲ್ಲಿ ಮಳೆಯಿಂದಾಗಿ ಏರುತ್ತಿರುವ ನೀರನ್ನು ಕೆರೆಗಳಿಗೆ ನೀಡುವ ಸಲುವಾಗಿ ರಾಜನಹಳ್ಳಿ ಮತ್ತು ಇಲ್ಲಿನ ಏತ ನೀರಾವರಿಗಳ ಪಂಪ್‌ಗಳನ್ನು ಚಾಲನೆ ಮಾಡಲಾಗಿದೆ.
ದೂರದ ಭಾಗಗಳಿಂದ ಬರುವ ಮೀನುಗಳು ಈಗ ಭರಮಸಾಗರದ ಕೆರೆ ಸೇರುತ್ತಿವೆ ಎಂಬುದು ಖುಷಿ ತರಿಸಿದೆ. ಮಹಿಳೆಯರು ಮಕ್ಕಳಾದಿಯಾಗಿ ಎಲ್ಲರೂ ಮೀನುಗಳನ್ನು ಸಂಗ್ರಹಿಸುತ್ತಿದ್ದಾರೆ.
ಕೆರೆಯ ಸುತ್ತಮುತ್ತಲ ಗ್ರಾಮಗಳ ಜನರು ಮೀನು ಹಿಡಿಯುವುದನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಕೆಲವರು ಈ ಮೀನುಗಳನ್ನು ಕೆಜಿಗೆ 30 ರಿಂದ 100 ರೂ.ಗೆ ಮಾರಾಟ ಮಾಡುತ್ತಿದ್ದಾರೆ.