

ಬೆಂಗಳೂರು: ಜೈನ್ ಎಂಟರ್‌ಪ್ರಿನ್ಯೂರಿಯಲ್ ಫೆಸ್ಟಿವಲ್ ವೀಕ್ 2025ರಲ್ಲಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ 'ಫೌಂಡರ್ಸ್ ಕಪ್' ಮತ್ತು 'ಮಾವೆರಿಕ್' ಪ್ರಶಸ್ತಿಯನ್ನು ಜೈನ್ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಮತ್ತು ಜೈನ್ (ಡೀಮ್ಡ್-ಟು-ಬೀ ಯೂನಿವರ್ಸಿಟಿ) ವಿಶ್ವವಿದ್ಯಾನಿಲಯದ ಕುಲಪತಿ ಡಾ. ಚೆನರಾಜ್ ರಾಯ್‌ಚಂದ್ ಅನಾವರಣಗೊಳಿಸಿದರು.
ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಈ ಎರಡು ಗೌರವಾನ್ವಿತ ಪ್ರಶಸ್ತಿಗಳನ್ನು ಪರಿಚಯಿಸಲಾಯಿತು. ಉದ್ಯಮಶೀಲತೆ ವಿಭಾಗದಲ್ಲಿ ಶ್ರೇಷ್ಠ ಸಾಧನೆ ಮಾಡುವ ಕ್ಯಾಂಪಸ್ ಮತ್ತು ವಿದ್ಯಾರ್ಥಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಜೈನ್ ಫೌಂಡರ್ಸ್ ಕಪ್ ಪ್ರಶಸ್ತಿಯನ್ನು ಉದ್ಯಮಶೀಲತೆ ವಿಭಾಗದಲ್ಲಿ ಅತ್ಯುನ್ನತ ಸಾಧನೆ ಮಾಡುವ ಕ್ಯಾಂಪಸ್ ಗೆ ನೀಡಲಾಗುತ್ತಿದ್ದು, ಇದೊಂದು ರೋಲಿಂಗ್ ಟ್ರೋಫಿಯಾಗಿದೆ. ಜೈನ್ ಮಾವೆರಿಕ್ ಪ್ರಶಸ್ತಿಯು ಫೆಸ್ಟಿವಲ್ ನ ಅತ್ಯುತ್ತಮ ವಿದ್ಯಾರ್ಥಿ ಉದ್ಯಮಿಗೆ ನೀಡಲಾಗುವ ಉನ್ನತ ಮಟ್ಟದ ವೈಯಕ್ತಿಕ ಗೌರವವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಚೆನರಾಜ್ ರಾಯ್‌ಚಂದ್ ಅವರು, ಜೈನ್ (ಡೀಮ್ಡ್-ಟು-ಬೀ ಯೂನಿವರ್ಸಿಟಿ) ವಿಶ್ವವಿದ್ಯಾಲದ ಬುನಾದಿಯಲ್ಲಿ ಉದ್ಯಮಶೀಲತೆಯ ಆಧಾರದ ಮೇಲೆ ನಿರ್ಮಿಸಲಾಗಿದೆ. ಆರಂಭದ ದಿನಗಳಿಂದಲೂ ಶಿಕ್ಷಣ ನೀಡುವುದಷ್ಟೇ ನಮ್ಮ ಉದ್ದೇಶವಲ್ಲ, ಬದಲಿಗೆ ನಮ್ಮ ವಿದ್ಯಾರ್ಥಿಗಳನ್ನು ಸೃಷ್ಟಿಕರ್ತರಾಗಿ, ಆವಿಷ್ಕಾರಕರಾಗಿ ಮತ್ತು ಭವಿಷ್ಯವನ್ನು ರೂಪಿಸುವ ಸಶಕ್ತ ನಾಯಕರನ್ನು ಬೆಳೆಸುವ ಉದ್ದೇಶ ಹೊಂದಿದ್ದೇವೆ. ಈ ಪ್ರಶಸ್ತಿಗಳು ಕೇವಲ ಟ್ರೋಫಿಗಳಲ್ಲ, ಇವು ಮುಂದಿನ ಪೀಳಿಗೆಗೆ ದೊಡ್ಡದಾಗಿ ಕನಸು ಕಾಣಲು ಮತ್ತು ಧೈರ್ಯವಾಗಿ ಮುನ್ನುಗ್ಗಲು ಪ್ರೇರೇಪಣೆ ನೀಡುವ ಶಕ್ತಿಗಳಾಗಿವೆ ಎಂದು ಹೇಳಿದರು.
ಈ ಕುರಿತು ಜೈನ್ ಲಾಂಚ್‌ಪ್ಯಾಡ್‌ನ ಸಿಇಓ ಮತ್ತು ಜೆ.ಇ.ಎಫ್.ಡಬ್ಲ್ಯೂನ ಚಾಲಕ ಶಕ್ತಿಯಾಗಿರುವ ನಯಾಜ್ ಅಹ್ಮದ್ ಅವರು ಮಾತನಾಡಿ, “ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಈ ಜಗತ್ತಿನಲ್ಲಿ, ಉದ್ಯಮಶೀಲತೆಯು ಈಗ ಒಂದು ವಿಶೇಷ ವೃತ್ತಿಯ ಮಾರ್ಗವಾಗಿ ಮಾತ್ರ ಉಳಿದಿಲ್ಲ, ಬದಲಿಗೆ ಇದು 21ನೇ ಶತಮಾನದ ಮೂಲಭೂತ ಕೌಶಲ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆಯಲ್ಲಿ ಉದ್ಯಮಶಿಲತಾ ಮನೋಭಾವವನ್ನು ಬೆಳೆಸುವ ಒಂದು ಪರಿಸರವನ್ನು ಒದಗಿಸುವುದಕ್ಕೆ ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಜೈನ್ ಎಂಟರ್‌ಪ್ರೆನ್ಯೂರಿಯಲ್ ಫೆಸ್ಟಿವಲ್ ವೀಕ್ ಎನ್ನುವುದು ಎಲ್ಲಾ ಶೈಕ್ಷಣಿಕ ವಿಭಾಗಗಳಲ್ಲಿ ಉದ್ಯಮಶೀಲ ಮನೋಭಾವವನ್ನು ಬೆಳೆಸಲು ರೂಪಿಸಲಾದ ಪ್ರಮುಖ ಕಾರ್ಯಕ್ರಮವಾಗಿದ್ದು, ಈ ಉತ್ಸವದಲ್ಲಿ ಅನೇಕ ಸ್ಪರ್ಧೆಗಳು, ಕಾರ್ಯಾಗಾರಗಳು ಮತ್ತು ಉಪನ್ಯಾಸಗಳು ನಡೆಯಲಿದೆ. ಅಂತಿಮವಾಗಿ ಸೆಸಾ ಕಾರ್ಯಕ್ರಮದಲ್ಲಿ ಅದ್ದೂರಿ ಫೈನಲ್ ನಡೆಯಲಿದೆ.