

ಮಡಿಕೇರಿ:
ಮಡಿಕೇರಿಯಲ್ಲಿ ಸ್ಥಾಪನೆಯಗಲಿರುವ ಅತ್ಯಾಧುನಿಕ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ (ಜ.೨೫)ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಪ್ರಚುರ ಪಡಿಸುವ ಉದ್ದೇಶದಿಂದಮ, ವಿಜ್ಞಾನದ ಶಿಕ್ಷಣ, ವೈಚಾರಿಕ ಚಿಂತನೆ ಮೂಡಿಸುವುದಕ್ಕೆ ಹಾಗೂ ಖಗೋಳ ವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳನ್ನ ಸ್ಥಾಪಿಸಲಾಗುತ್ತಿದೆ. ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಎಂದೇ ಕರೆಯಲ್ಪಡುವ ಮಡಿಕೇರಿಯಲ್ಲಿ ರಾತ್ರಿ ವೇಳೆ ಬೆಳಕಿನ ಅಡಚಣೆ ಬಹಳ ಕಡಿಮೆ ಇದ್ದು, ಇದು ನಕ್ಷತ್ರಗಳು ಹಾಗೂ ಗ್ರಹಗಳ ವೀಕ್ಷಣೆಗೆ ಇರುವಂತಹ ದೇಶದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಹಾಗಾಗಿ ಇಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಸುಮಾರು ೧೨.೨೬ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅತ್ಯಾಧುನಿಕ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸ್ಥಾಪನೆ ಆಗುತ್ತಿದೆ.
ಸ್ವಚ್ಚ ಆಕಾಶ, ಹೆಚ್ಚಿನ ವಾಯಮಾಲಿನ್ಯ ಹಾಗೂ ಬೆಳಕಿನ ಅಡಚಣೆ ಇಲ್ಲದೇ ಇರುವಂತಹ ರಾತ್ರಿ ನಕ್ಷತ್ರ ವೀಕ್ಷಣೆಗೆ ಉತ್ತಮ ವಾತಾವರಣ ಕಲ್ಪಿಸುವಂತಹ ಪರಿಸರ ಕೊಡಗಿನಲ್ಲಿದೆ. ಹಿಮಾಚಲ ಪ್ರದೇಶದ ಸ್ಪಿಟಿ ಕಣಿವೆ, ಲಡಾಖ್‌ನ ಪಂಗೋಂಗ್ ತ್ಸೋ ಸರೋವರ, ಗುಜರಾತ್‌ನ ರನ್ ಅಫ್ ಕಚ್, ಅಂಡಮಾನ್ ಮತ್ತು ನಿಕೋಬಾರ್‌ನ ನೀಲ್ ದ್ವೀಪ ಹಾಗೂ ಮಹರಾಷ್ಟ್ರದ ಮಾಥೇರಾನ್ ನಂತೆಯೇ ಕೊಡಗು ಅತ್ಯಂತ ಪ್ರಶಸ್ತವಾದ ಜಾಗ ಎನ್ನುವ ಹೆಗ್ಗಳಿಕೆಯನ್ನು ಹೊಂದಿದೆ. ಜಿಲ್ಲೆಯಲ್ಲಿ ಬಾಹ್ಯಾಕಾಶ ಪ್ರವಾಸಕ್ಕೆ ಇಂಬು ನೀಡುವ ಮತ್ತು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.