

ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಲಿರುವ ಸೇವಾ ಕೇಂದ್ರ ಮತ್ತು ವಿಶ್ರಾಂತಿಗೃಹ ಕಟ್ಟಡದ ಶಿಲಾನ್ಯಾಸ ಭಾನುವಾರ ಜರುಗಿತು.
ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್.ಮುರಳಿ ಶಿಲಾನ್ಯಾಸ ನೆರವೇರಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಿ. ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ತಂತ್ರಿ ಡಾ.ಶಿವಪ್ರಸಾದ್ ತಂತ್ರಿ ದೇರೆಬೈಲು ಅನುಗ್ರಹ ಭಾಷಣ ಮಾಡಿದರು.
ಮಧೂರು ಕ್ಷೇತ್ರ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಮಲಬಾರ್ ದೇವಸ್ವಂ ಬೋರ್ಡ್ ಸಹಾಯಕ ಆಯುಕ್ತ ಪ್ರದೀಪ್ ಕುಮಾರ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಶ್ರೀ ಕ್ಷೇತ್ರ ನಿರ್ವಹಣಾಧಿಕಾರಿ ರಾಜೇಶ್ ಟಿ, ಉದ್ಯಮಿ ಕೆ.ಕೆ.ಶೆಟ್ಟಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗಿರೀಶ್ ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.