ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ

Foundation stone laying for construction of war memorial in Mysore
Published on

ಮೈಸೂರು: ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯಲ್ಲಿ 1.41 ಕೋಟಿ ರೂ. ವೆಚ್ಚದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಶುಕ್ರವಾರ ಶಂಕು ಸ್ಥಾಪನೆ ನೆರವೇರಿಸಲಾಯಿತು. ಆ ಮೂಲಕ ಸೈನಿಕರ ಎರಡು ದಶಕಗಳ ಕನಸು ನನಸಾಗಿದೆ.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ಸರ್ವಧರ್ಮ ಪ್ರಾರ್ಥನೆಯ ಬಳಿಕ ಶಾಸಕ ಎಲ್. ನಾಗೇಂದ್ರ ಭೂಮಿಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಆಗುತ್ತಿರುವುದು ಎಲ್ಲರಿಗೂ ಸಂತಸ ಉಂಟು ಮಾಡುವ ವಿಚಾರ. ದೇಶ ರಕ್ಷಣೆಗೆ ಹಲವಾರು ಯೋಧರು ತಮ್ಮ ಪ್ರಾಣವನ್ನು ಬಲಿದಾನವಾಗಿ ನೀಡಿದ್ದಾರೆ. ಕುಟುಂಬದಲ್ಲಿ ಎಷ್ಟೇ ಕಷ್ಟಗಳು ಇದ್ದರೂ ದೇಶಕ್ಕೋಸ್ಕರ ಯೋಧರು ದುಡಿಯುತ್ತಿದ್ದಾರೆ. ಅವರೆಲ್ಲರ ತ್ಯಾಗ ಬಲಿದಾನವನ್ನು ಸ್ಮರಿಸಲು ಸ್ಮಾರಕ ನಿರ್ಮಾಣ ಆಗುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.

ಶಾಸಕ ಎಚ್.ಪಿ. ಮಂಜುನಾಥ್ ಮಾತನಾಡಿ, ಸೈನಿಕರ ಸೇವೆ, ಬಲಿದಾನಕ್ಕೆ ಯಾವುದು ಸರಿಸಾಟಿ ಇಲ್ಲ. ನಗರದಲ್ಲಿ ಯುದ್ಧ ಸ್ಮಾರಕ ನಿರ್ಮಾಣದ ಮೂಲಕ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ. ಮೈಸೂರಿನಲ್ಲಿ ಯುದ್ಧ ಸ್ಮಾರಕ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಹಾಗೂ ಸಂತಸದ ವಿಚಾರ ಎಂದರು.

ಶಂಕುಸ್ಥಾಪನೆ ಸಂದರ್ಭ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು, ಮೇಜರ್ ಜನರಲ್‌ಗಳಾದ ಕೆ.ಕೆ. ಮೂರ್ತಿ, ಸಿ.ಕೆ. ಕರುಂಬಯ್ಯ, ಸುಧೀರ್ ಜಿ. ಒಂಬತ್ಕೆರೆ, ಲೆಫ್ಟಿನೆಂಟ್ ಜನರಲ್ ವಿಜಯ ಕುಮಾರ್, ಎನ್‌ಸಿಸಿ ಗ್ರೂಪ್ ಕಮಾಂಡರ್ ಕರ್ನಲ್ ರಾಕೇಶ್, ವಿಂಗ್ ಕಮಾಂಡ್ ಜಾಗೃತಿ, ಬ್ರಿಗೇಡಿಯರ್ ವಿನೋದ್ ಕುಮಾರ್ ಅಡಪ, ಕನ್ನಡ ಮತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net