

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ವಿಂಗಡಿಸಿರುವ ಐದು ಕಾರ್ಪೋರೇಷನ್‌ಗಳಿಗೆ ಹೊಸ ಕಚೇರಿಗಳನ್ನು ನಿರ್ಮಿಸುವ ಸಂಬಂಧ ನ.1ರಂದು ‘ಪಾಲಿಕೆ ಸೌಧ’ಕ್ಕೆ ಸಂಕುಸ್ಥಾಪನೆ ನಡೆಯಲಿದೆ.
ಬಿಬಿಎಂಪಿಯಿಂದ ಜಿಬಿಎಗೆ ಬದಲಾವಣೆಗೊಂಡ ಹಿನ್ನೆಲೆ ಹಿಂದಿನ ಪಾಲಿಕೆಯ ವಲಯ ಕಚೇರಿಗಳನ್ನೇ ತಾತ್ಕಾಲಿಕವಾಗಿ ಹೊಸ ಕಚೇರಿಗಳಾಗಿ ಪರಿವರ್ತಿಸಲಾಗಿದೆ. ಇವುಗಳಲ್ಲಿ ಸೀಮಿತ ಪ್ರಮಾಣದ ಸ್ಥಳಾವಕಾಶ ಇರುವುದರಿಂದ ಚುನಾಯಿತ ಸದಸ್ಯರು ಅಧಿಕಾರ ವಹಿಸಿಕೊಂಡ ಬಳಿಕ ಹೆಚ್ಚಿನ ಕಚೇರಿ, ಸಭಾಂಗಣ ಇತ್ಯಾದಿ ಸೌಲಭ್ಯ ಬೇಕಾಗುತ್ತದೆ. ಇದನ್ನು ಗಮನಿಸಿಯೇ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಕೇಂದ್ರ ನಗರ ಪಾಲಿಕೆಗಳ ಆಡಳಿತಕ್ಕಾಗಿ ಈ ನೂತನ ಪಾಲಿಕೆ ಸೌಧ ಬಳಕೆಯಾಗಲಿವೆ.
ಪ್ರತಿಯೊಂದು ಪಾಲಿಕೆಯೂ ತನ್ನ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಕೌನ್ಸಿಲ್ ಸಭಾಂಗಣ, ಸಣ್ಣ ಸಭೆಗಳನ್ನು ನಡೆಸಲು ಮಿನಿ ಸಭಾಂಗಣ, ಆಯುಕ್ತ, ಹೆಚ್ಚುವರಿ ಆಯುಕ್ತ, ಮೇಯರ್/ಉಪಮೇಯರ್, ಸ್ಥಾಯಿ ಸಮಿತಿ ಸೇರಿ ವಿವಿಧ ವಿಭಾಗಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಪ್ರತ್ಯೇಕ ಕೊಠಡಿಗಳು ಇರಲಿವೆ. ವಾಹನಗಳ ಪಾರ್ಕಿಂಗ್ ಸೌಲಭ್ಯಕ್ಕಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. 24/7 ವಿದ್ಯುತ್ ಪೂರೈಕೆಗೆ ವಿದ್ಯುತ್ ನಿರ್ವಹಣಾ ಕೇಂದ್ರ, ಭದ್ರತಾ ಕೊಠಡಿಗಳು ನಿರ್ಮಾಣವಾಗಲಿವೆ. ಇಡೀ ಪಾಲಿಕೆ ಸೌಧದ ಆವರಣವು ಮಳೆನೀರು ಕೊಯ್ಲು ಪದ್ಧತಿಗೆ ಒಳಪಡಿಸಲಾಗುತ್ತದೆ. ಸೌರ ವಿದ್ಯುತ್ ಸಂಪರ್ಕ ಪಡೆಯಲು ಅವಕಾಶವಿರುವಂತೆ ವಿನ್ಯಾಸ ಮಾಡಲಾಗುತ್ತದೆ.
100 ಕೋಟಿ ರೂ. ನಿಗದಿ:
ಪಂಚ ಪಾಲಿಕೆಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ 100 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಪ್ರತಿ ಪಾಲಿಕೆಗೆ 20-25 ಕೋಟಿ ರೂ. ಖರ್ಚಾಗುವುದೆಂದು ಅಂದಾಜಿಸಲಾಗಿದೆ. ಶಂಕುಸ್ಥಾಪನೆ ನೆರವೇರಿದ ಬಳಿಕ ಈ ವರ್ಷಾಂತ್ಯದೊಳಗೆ ಟೆಂಡರ್ ಆಹ್ವಾನಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಅವಕಾಶ ಕಲ್ಪಿಸಲು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಪಾಲಿಕೆ ಸೌಧಗಳ ನಿರ್ಮಾಣಕ್ಕೆ 2 ವರ್ಷದ ಗಡುವು ವಿಧಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಐದೂ ಪಾಲಿಕೆಗಳಿಗೆ ಹೊಸ ಕಟ್ಟಡಕ್ಕಾಗಿ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಜಮೀನು ಲಭ್ಯತೆ ಆಧರಿಸಿ ಆಯಾ ಕಾರ್ಪೋರೇಷನ್‌ಗಳ ವ್ಯಾಪ್ತಿಯಲ್ಲೇ 1-3 ಎಕರೆ ಜಾಗವನ್ನು ಆಯ್ಕೆ ಮಾಡಲಾಗಿದೆ. ಜಮೀನಿನ ದಾಖಲೆ ಪರಿಶೀಲಿಸಿ ಅಗತ್ಯ ಜಾಗವನ್ನು ಸುಪರ್ದಿಗೆ ಪಡೆದು ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
ಪೌರ ಸಭಾಂಗಣದಲ್ಲಿ ತಾತ್ಕಾಲಿಕ ವ್ಯವಸ್ಥೆ:
ಪಾಲಿಕೆಗಳಿಗೆ ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಚುನಾಯಿತ ಸದಸ್ಯರ ಮಾಸಿಕ ಸಭೆ, ವಿಶೇಷ ಸಭೆಗಳನ್ನು ನಡೆಸಲು ಜಿಬಿಎ ಆವರಣದಲ್ಲಿರುವ ಕೆಂಪೇಗೌಡ ಪೌರ ಸಭಾಂಗಣವನ್ನು ಬಳಸಿಕೊಳ್ಳಲಾಗುತ್ತದೆ. ಐದೂ ಪಾಲಿಕೆಗಳು ನಿಗದಿತ ದಿನಗಳಂದು ಇಲ್ಲಿಯೇ ಕೌನ್ಸಿಲ್ ಸಭೆಗಳನ್ನು ನಡೆಸಲು ತಾತ್ಕಾಲಿಕ ವ್ಯವಸ್ಥೆ ಕೈಗೊಳ್ಳಲಾಗುತ್ತದೆ.
ಪಾಲಿಕೆ ಸೌಧ ನಿರ್ಮಾಣದ ಸ್ಥಳವಿವರ:
ಉತ್ತರ ಚೊಕ್ಕನಹಳ್ಳಿ, ಥಣಿಸಂದ್ರ-ಹೆಗಡೆನಗರ ರಸ್ತೆ (2 ಎಕರೆ)
ದಕ್ಷಿಣ ಬನಶಂಕರಿ ಮೆಟ್ರೋ ನಿಲ್ದಾಣ ಸಮೀಪ (3 ಎಕರೆ)
ಪೂರ್ವ ವರ್ತುಲ ರಸ್ತೆ, ಮಹದೇವಪುರ (1.5 ಎಕರೆ)
ಪಶ್ಚಿಮ ಅತ್ತಿಗುಪ್ಪೆ, ಕಾರ್ಡ್ ರಸ್ತೆ ಸಮೀಪ (3 ಎಕರೆ)
ಕೇಂದ್ರ ಜಿಬಿಎ ಆವರಣ (ಅನೆಕ್ಸ್-3 ಕಟ್ಟಡ)