

ಶ್ರೀಶೈಲಂ: ಆಂಧ್ರಪ್ರದೇಶದ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಶ್ರೀಶೈಲದಲ್ಲಿ ಜಗದ್ಗುರು ಸೂರ್ಯಸಿಂಹಾಸನ ಪಂಡಿತಾರಾಧ್ಯ ಮಹಾಪೀಠದ ವತಿಯಿಂದ ನಿರ್ಮಾಣ ಮಾಡಲು ಉದ್ದೇಶಿಸಿರುವ ಯಾತ್ರಿನಿವಾಸ ಹಾಗೂ ಮಲ್ಲಿಕಾರ್ಜುನ ಸ್ವಾಮಿಯ ಬೃಹತ್ ಕಂಬಿ ಮಂಟಪ ಕಾಮಗಾರಿಗೆ ಕರ್ನಾಟಕದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಶಾಸಕರಾದ ಬಸವರಾಜ್ ರಾಯರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಯುಗಾದಿ ವೇಳೆಯಲ್ಲಿ ಶ್ರೀಶೈಲದಲ್ಲಿ ನಡೆಯುವ ಬೃಹತ್ ಜಾತ್ರೆ ಮತ್ತು ರಥೋತ್ಸವಕ್ಕೆ ಕರ್ನಾಟಕದಿಂದ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಹಾಗೆ ಬರುವ ಭಕ್ತರಿಗೆ ವಸತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರೀಶೈಲ ಪೀಠವು 374 ಕೊಠಡಿಗಳು ಬೃಹತ್ ಯಾತ್ರಿನಿವಾಸ, ಉಚಿತ ಆಸ್ಪತ್ರೆ, ಎರಡು ಡಾರ್ಮೆಟ್ರಿ ಹಾಲ್ಗಳು, ಎರಡು ದಾಸೋಹ ಭವನಗಳು, ಹಾಗೂ ವಿಶೇಷವಾಗಿ ಕರ್ನಾಟಕದ ಹಳ್ಳಿ ಹಳ್ಳಿಗಳಿಂದ ಭಕ್ತರು ಪಾದಯಾತ್ರೆ ಮೂಲಕ ಹೊತ್ತು ತರುವ ಮಲ್ಲಯ್ಯನ ಕಂಬಿಗಳನ್ನು ಇರಿಸಲು ಕಂಬಿ ಮಂಟಪವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಜೊತೆಗೆ ನೂರಕ್ಕೂ ಹೆಚ್ಚು ವಾಹನಗಳ ನಿಲುಗಡೆಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು ತಿಳಿಸಿದರು.
ಶಂಕುಸ್ಥಾಪನಾ ಸಮಾರಂಭದಲ್ಲಿ ಜಮಖಂಡಿ, ನಾಗಣಸೂರು, ಅಂಬಿಕಾನಗರ, ಶಹಾಪುರ, ನೀಲಗಲ್, ಕರಿಬಂಟನಾಳ ಮುಂತಾದ ಮಠಗಳ ಶ್ರೀಗಳು, ವಿಧಾನ ಪರಿಷತ್ ಸದಸ್ಯರಾದ ಹನುಮಂತ ನಿರಾಣಿ, ಉದ್ಯಮಿಗಳಾದ ನವಲಿ ಹಿರೇಮಠ, ಬಸವರಾಜ ಬುಕ್ಕಾಣಿ, ಶಾಂತಗೌಡ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.