

ಬೆಳ್ತಂಗಡಿ: ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ಮಾಡಿ, ಔಷಧ ನೀಡುವ ಗೃಹ ಆರೋಗ್ಯ ಯೋಜನೆ ಕೋಲಾರದಲ್ಲಿ ಜಾರಿಯಾಗಿದ್ದು, ಮಾರ್ಚ್ ವೇಳೆಗೆ ಇದನ್ನು ರಾಜ್ಯಕ್ಕೆ ವಿಸ್ತರಿಸಲಾಗುವುದು. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. 11 ಕೋಟಿ ರೂ.ಅನುದಾನದಲ್ಲಿ ದ.ಕ ಜಿಲ್ಲೆಯಲ್ಲಿ 17 ಆರೋಗ್ಯ ಕ್ಷೇಮ ಕೇಂದ್ರಗಳು ನಿರ್ಮಾಣವಾಗಲಿವೆ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಶನಿವಾರ ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 4 ಕೋಟಿ ರೂ.ಅನುದಾನದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡ ಮತ್ತು ಸಿಬ್ಬಂದಿ ವಸತಿಗೃಹ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಮಚ್ಚಿನ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ, ಉಪಾಧ್ಯಕ್ಷೆ ಸೋಮಾವತಿ, ಪುತ್ತೂರು ಎಸಿ ಜುಬಿನ್ ಮೊಹಪಾತ್ರ, ತಾಪಂ ಇಒ ಭವಾನಿ ಶಂಕರ್, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶೇಖರ್ ಕುಕ್ಕೇಡಿ, ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯನ್, ಪೆರಾಡಿ ಪ್ಯಾಕ್ಸ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಟಿಎಚ್‌ಒ ಡಾ.ಸಂಜಾತ್ ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಪ್ರಮೋದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಚ್‌ಒ ಡಾ.ತಿಮ್ಮಯ್ಯ ಎಚ್.ಆರ್.ಸ್ವಾಗತಿಸಿದರು. ಪ್ರಾಥಮಿಕ ಸುರಕ್ಷತಾ ಅಧಿಕಾರಿ ಲೋಲಾಕ್ಷಿ ನಿರೂಪಿಸಿದರು. ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳ ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಬೆನ್ನೆಲುಬಾಗಿದ್ದು ಅವರಿಗೆ ಮಾಸಿಕ ಕನಿಷ್ಠ 10 ಸಾವಿರ ರೂ.ಗೌರವ ಧನ ಏಪ್ರಿಲ್‌ನಿಂದ ನೀಡುವ ಕುರಿತು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಕೇಂದ್ರ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವಧನದ ಪಾಲನ್ನು ಹೆಚ್ಚಿಸಬೇಕು
ಕರೊನಾ ಅವಧಿಯಲ್ಲಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉನ್ನತ ಮಟ್ಟದ ಸೇವೆ ನೀಡಲಾಗಿದೆ. ಆಯುಷ್ಮಾನ್ ಭಾರತ ಯೋಜನೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡಬೇಕು. ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಬದಲು ವೇತನ ನೀಡಬೇಕು. ತಾಲೂಕು ಆಸ್ಪತ್ರೆಯಲ್ಲೂ ಕಳೆದ ಅವಧಿಯಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಲಾಗಿದೆ. ಹರೀಶ್ ಪೂಂಜ, ಶಾಸಕ