ರೈತರು ಏಳಿಗೆಯಾದರೆ ದೇಶ ಅಭಿವೃದ್ಧಿಯಾದಂತೆ: ನಿವೃತ್ತ ಅಧ್ಯಾಪಕ ಸಿ.ಸಿದ್ದರಾಜು ಆಲಕೆರೆ ಹೇಳಿಕೆ

Foundation stone for construction of farmers school Mandya
Published on

ಮಂಡ್ಯ: ಭಾರತ ಕೃಷಿ ಪ್ರಧಾನ ಕಸುಬುವುಳ್ಳ ದೇಶ. ಹಾಗಾಗಿ ರೈತರು ಏಳಿಗೆ ಹೊಂದಿದರೆ ದೇಶವೇ ಅಭಿವೃದ್ಧಿಯಾದಂತೆ ಎಂದು ಕಾಲೇಜಿನ ನಿವೃತ್ತ ಅಧ್ಯಾಪಕ ಸಿ.ಸಿದ್ದರಾಜು ಆಲಕೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಆಲಕೆರೆ ಗ್ರಾಮದಲ್ಲಿ ಕೆಂಪೇಗೌಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ’ರೈತರ ಶಾಲೆ’ಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ದೇಶದ ಜನತೆಯ ಹಸಿವನ್ನು ನೀಗಿಸುವ ಜೀವದಾತರು. ಈಗ ಭಾರತ ಆಹಾರ ಸ್ವಾವಲಂಬನೆ ಸಾಧಿಸಿ ಮುನ್ನೆಡೆ ಹೊಂದುವಲ್ಲಿ ರೈತರ ಪಾತ್ರ ಪ್ರಮುಖವಾಗಿದೆ. ರೈತರು ಬೇಸಿಗೆ, ಮಳೆಗಾಲ, ಚಳಿಗಾಲ ಎನ್ನದೆ ಹೊಲದಲ್ಲಿ ಉಳುಮೆ ಮಾಡಿ ಬೆಳೆ ತೆಗೆಯಲು ಬೆವರು ಸುರಿಸಿ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಎಲ್ಲ ರೀತಿಯಲ್ಲೂ ಅವರಿಗೆ ಸಹಾಯವಾಗುವಂತ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಭಾರತ ಹಳ್ಳಿಗಳ ಬೀಡು. ಇಲ್ಲಿ ಕೃಷಿಗೆ ಸಂಬಂಧಿಸಿದ ಕಾಲೇಜುಗಳು ಇವೆ. ಆದರೆ ಪ್ರಾಥಮಿಕ ಶಾಲಾ ಹಂತದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕೃಷಿ ವಿಷಯ ಸಂಬಂಧ ಪಟ್ಟ ಪಠ್ಯ ವಿಷಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ’ರೈತ ಶಾಲೆ’ ತೆರೆಯಲು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ’ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ’ದ ಯೋಜನೆ ದೇಶಕ್ಕೆ ಮಾದರಿ ಎಂದು ಸ್ಲಾಘನೆ ಮಾಡಿದರು.

ಸಂಘದ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿಯೂ ಆದ ರೈತರ ಶಾಲೆಯ ಸಂಸ್ಥಾಪಕ ಸತ್ಯಮೂರ್ತಿ ಗಂಜಾಂ, ಆಲಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಶಶಿಧರ್, ಮನ್‌ಮುಲ್ ಉಪಾಧ್ಯಕ್ಷ ರಘುನಂದನ್, ಸಂಘದ ಪದಾಧಿಕಾರಿಗಳಾದ ನವೀನ್‌ಕುಮಾರ್, ಜಗದೀಶ್, ರಾಮಕೃಷ್ಣ, ಮಹೇಶ್, ರವಿಕುಮಾರ್, ಧರ್ಮರಾಜ್, ನಂದೀಶ್ ಇತರರಿದ್ದರು. ಇದೇ ವೇಳೆ ಕಟ್ಟಡ ನಿರ್ಮಾಣಕ್ಕೆ ಸಹಾಯಕವಾಗುವಂತೆ ಮದ್ದೂರಿನ ಸಿಂಧೂ ದೀಪಕ್ ಅವರು ಹತ್ತು ಸಾವಿರ ರೂಪಾಯಿ ಚೆಕ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net