ಗ್ಯಾರಂಟಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಹಣ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

Foundation laying of Nadakacheri building mandya
Published on

ಮಂಡ್ಯ: ರಾಜ್ಯ ಸರ್ಕಾರ ನೀಡಿರುವ ಐದು ಗ್ಯಾರಂಟಿ ಯೋಜನೆಗಳಿಗೆ 70 ಸಾವಿರ ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಅದರಂತೆ ಪ್ರತಿ ಮನೆಗೆ ಐದರಿಂದ ಏಳು ಸಾವಿರ ರೂ ಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಶನಿವಾರ ನಾಡಕಚೇರಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಬಿಎಂಸಿ ಕೇಂದ್ರ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬರಗಾಲದ ಸಮಸ್ಯೆಯಲ್ಲಿ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ರಚನೆಯಾಗಿದೆ. ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿರುವುದಕ್ಕೆ ರಾಷ್ಟ್ರವ್ಯಾಪಿ ಪ್ರಶಂಸೆ ಸಿಕ್ಕಿದೆ ಎಂದು ತಿಳಿಸಿದರು.

ಜೆಡಿಎಸ್ ರಾಜಕೀಯ ನಾಯಕರ ಪಕ್ಷದ ಬದಲಾವಣೆ ನಡವಳಿಕೆಯಿಂದ ಜಿಲ್ಲೆಯಲ್ಲಿ ನಾವೇ ಕಟ್ಟಿದ ಆ ಪಕ್ಷವನ್ನು ಬಿಟ್ಟು ಹೋದೆವು. ರಮೇಶ ಬಂಡಿಸಿದ್ದೇಗೌಡ ಅಲ್ಲಿಯೇ ಇದ್ದಿದ್ದರೆ ಚೆಸ್ಕಾಂ ಅಧ್ಯಕ್ಷರು ಆಗುತ್ತಿರಲಿಲ್ಲ. ಪ್ರಥಮವಾಗಿ 2006-07ರಲ್ಲಿ ಆರಂಭವಾದ ಚೆಸ್ಕಾಂಗೆ ಯಾರು ಅಧ್ಯಕ್ಷರು ಆಗಿರಲಿಲ್ಲ. ರಮೇಶ ಬಂಡಿಸಿದ್ದೇಗೌಡ ಅವರ ಕುಟುಂಬದ ಕ್ಷೇತ್ರದ ಸೇವೆಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಜೆಡಿಎಸ್ ಪಕ್ಷದಲ್ಲಿ ನಾನು ಮಂತ್ರಿಯಾಗಿದ್ದು ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಯಾಗಿರುವ ವ್ಯತ್ಯಾಸವೇ ಬೇರೆ ಎಂದ ಅವರು, ರಮೇಶ ಬಂಡಿಸಿದ್ದೇಗೌಡ ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಕಳೆದ ಎಂಟು ತಿಂಗಳಲ್ಲಿ 200 ಕೋಟಿ ರೂ ಅನುದಾನ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಯಿಂದ ಬಿಡುಗಡೆ ಮಾಡಿಸಿದ್ದಾರೆ. ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಸಿ, ಲೈನ್, ಕಂಬ ಬದಲಾವಣೆ ಸೇರಿದಂತೆ ಇಂಧನ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನೀವುಗಳು ಗಟ್ಟಿಯಾಗಿ ನಿಂತರೆ ನಮಗೆ ಶಕ್ತಿ ಬರುತ್ತದೆ. 30 ರಿಂದ 40 ಲಕ್ಷ ರೂ ಬೆಲೆಬಾಳುವ ಜಾಗವನ್ನು ನಾಡಕಚೇರಿಗೆ ಕೊಡುಗೆಯಾಗಿ ಕೊಟ್ಟಿರುವ ಯಜಮಾನ್ ಗುರುಮಲ್ಲಪ್ಪ ಅವರ ಕುಟುಂಬವನ್ನು ಯಾವುದೇ ಸಂದರ್ಭದಲ್ಲೂ ಗೌರವವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು. ಪೌತಿ ಖಾತೆ, ಆರ್‌ಟಿಸಿ ಇನ್ನಿತರ ಸಮಸ್ಯೆಗಳಿಗೆ ಯಾರು ಸಹ ತಹಸೀಲ್ದಾರ್ ಕಚೇರಿಯಲ್ಲಿ ಒಂದು ರೂಪಾಯಿ ಕೊಡಬೇಡಿ. ಅಂತಹ ವಿಚಾರಗಳು ಇದ್ದರೆ ನಮಗೆ ತಿಳಿಸಿ. ಒಂದು ವರ್ಷದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ಚೆಸ್ಕಾಂ ಅಧ್ಯಕ್ಷ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಚೀರನಹಳ್ಳಿ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿದ್ದು, ಶೀಘ್ರವೇ ಕೆಲಸ ಪ್ರಾರಂಭಿಸುತ್ತೇವೆ. 10 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ಸುತ್ತಮುತ್ತಲ ಪಿಕಪ್ ನಾಲೆ ಅಭಿವೃದ್ಧಿ, ಶಾಲೆಗಳ ಮಂಜೂರಾತಿ, ಟಿಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದರು.

ಮನಮುಲ್ ಅಧ್ಯಕ್ಷ ಬಿ.ಬೋರೇಗೌಡ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ, ಉಪ ತಹಸೀಲ್ದಾರ್ ಡಿ.ತಮ್ಮಣ್ಣಗೌಡ, ಜಿಪಂ ಮಾಜಿ ಸದಸ್ಯ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷೆ ಪಲ್ಲವಿ, ಕಾಂಗ್ರೆಸ್ ಮುಖಂಡರಾದ ತಗ್ಗಹಳ್ಳಿ ಕೃಷ್ಣ, ಮಹೇಂದ್ರ, ಕೆ.ಎಚ್.ನಾಗರಾಜು ಇತರರಿದ್ದರು.

ಇದೇ ಸಂದರ್ಭದಲ್ಲಿ ನಾಡಕಚೇರಿಗೆ ನಿವೇಶನ ನೀಡಿದ ದಾನಿ ತಗ್ಗಹಳ್ಳಿ ಗ್ರಾಮದ ಗುರು ಮಲ್ಲಪ್ಪ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net