

ಹುಬ್ಬಳ್ಳಿ: ಮನೆ ಬಿಟ್ಟರೆ ಮಠ-ಮಂದಿರಗಳಿಂದ ನಾವು ಸಂಸ್ಕಾರವನ್ನು ಕಲಿಯುತ್ತೇವೆ. ಧರ್ವಚರಣೆ, ಬೋಧನೆಗೆ ಉತ್ತಮ ವ್ಯವಸ್ಥೆ ಇರಬೇಕಾದರೆ ಮಠ-ಮಂದಿರಗಳು ಸಮೃದ್ಧವಾಗಿರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿ ವೀರಾಪೂರ ಓಣಿಯ ಎರಡೆತ್ತಿನಮಠದ ಆವರಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ವಣಕ್ಕೆ ಶುಕ್ರವಾರ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದ ಅವರು, ಧಾರ್ವಿುಕ ಸಂಸ್ಕಾರ, ಪೂಜಾ ಪದ್ಧತಿಯಿಂದ ಭಾರತೀಯರು ಹೆಚ್ಚು ಮಾನಸಿಕವಾಗಿ ಸುಖ ಮತ್ತು ಸಂಪತ್ತಿನಿಂದ ಜೀವಿಸುತ್ತಿದ್ದಾರೆ ಎಂದರು.
ಹೋರಾಟಗಾರರನ್ನು ಸಲುಹಿದ ಎರಡೆತ್ತಿನಮಠ
ಹುಬ್ಬಳ್ಳಿ ಈದ್ಗಾ ಮೈದಾನ ವಿವಾದಕ್ಕೂ ಪೂರ್ವ ಪಾಟೀಲಗಲ್ಲಿಯ ಅನಧಿಕೃತ ಮಸೀದಿ ತೆರವು ಹೋರಾಟ ತೀವ್ರ ಸ್ವರೂಪದ್ದಾಗಿತ್ತು. ಆಗ ಹಿಂದೂ ಹೋರಾಟಗಾರರಿಗೆ ಎರಡೆತ್ತಿನ ಮಠ ಆಶ್ರಯ ತಾಣವಾಗಿತ್ತು. ಹೋರಾಟಗಾರರಿಗೆ ಪೋಲಿಸ್ರಿಂದ ರಕ್ಷಣೆ ನೀಡಿ ಅನ್ನ ಆಶ್ರಯ ನೀಡಿ ಸಲುಹಿದ ಖ್ಯಾತಿ ಶ್ರೀ ಮಠಕ್ಕೆ ಸಲ್ಲುತ್ತದೆ ಎಂದು ಜೋಶಿ ನೆನಪಿಸಿಕೊಂಡರು.
ಎರಡೆತ್ತಿನ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಈದ್ಗಾ ಹೋರಾಟದಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರಿಗೆ ಎರಡೆತ್ತಿನ ಮಠ ಆಶ್ರಯ ನೀಡಿತ್ತು. ಆಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಬಿಜೆಪಿ ವರ್ಚಸ್ಸು ಅಷ್ಟಾಗಿರಲಿಲ್ಲ. ಇಂತಹ ಸಂದರ್ಭದಲ್ಲೂ ಧರ್ಮ ರಕ್ಷಣೆಗೆ ಹಿಂದೇಟು ಹಾಕದೇ ಪೊಲೀಸರಿಗೂ ಅಂಜದೇ ಹಿಂದೂಗಳಲ್ಲಿನ ಭಯ ದೂರಮಾಡಿದ ಖ್ಯಾತಿ ಎರಡೆತ್ತಿನ ಮಠಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಶಿವಮೊಗ್ಗ ಬೆಕ್ಕಿನ ಕಲ್ಮಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿದರು. ಪಾಲಿಕೆ ಸದಸ್ಯರಾದ ನಿರಂಜನ ಹಿರೇಮಠ, ಶಿವು ಮೆಣಸಿನಕಾಯಿ, ಶಂಕರಣ್ಣ ಬಿಜವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಈಶ್ವರಗೌಡ ಪಾಟೀಲ, ಲಿಂಗರಾಜ ಕಂಬಳಿ, ಶಶಿಕಾಂತ ಬಿಜವಾಡ, ಇತರರು ಇದ್ದರು.