ಕಸುವು ಕಳೆದುಕೊಂಡ ಕೈಮಗ್ಗ ನೇಕಾರಿಕೆ!

06manju10
Published on

ಮಂಜುನಾಥ ಗದಗಿನ ಬೆಳಗಾವಿ

ಮಹಾತ್ಮ ಗಾಂಧೀಜಿ ಅವರ ಸ್ವದೇಶಿ ಕಲ್ಪನೆಯ ಭದ್ರ ಬುನಾದಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೈಮಗ್ಗ ನೇಕಾರಿಕೆ ಇಂದು ಜಾಗತೀಕರಣದ ಪ್ರಭಾವದಿಂದಾಗಿ ಕಸುವು ಕಳೆದುಕೊಂಡು ಅವನತಿಯತ್ತ ಸಾಗಿದೆ.

ನೇಕಾರಿಕೆ ಉದ್ಯೋಗ ಇಂದು ಅಳವಿನಂಚಿನಲ್ಲಿದ್ದು, ಇದರಿಂದಾಗಿ ನೇಕಾರಿಕೆ ಅವಲಂಬಿಸಿದ ಕುಟುಂಬಗಳು ಕೂಡ ಬೇರೆ ಉದ್ಯೋಗದತ್ತ ಮುಖ ಮಾಡಿವೆ. ಸ್ವಾತಂತ್ರ್ಯಪೂರ್ವ ಕಾಲದಿಂದಲೂ ನೇಕಾರಿಕೆ ನೆಲೆಯೂರಿದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಮಹಾತ್ಮ ಗಾಂಧೀಜಿ ಸ್ವದೇಶ ಪರಿಕಲ್ಪನೆಯಡಿ ನೇಕಾರಿಕೆಗೆ ಉತ್ತೇಜನ ದೊರೆಯಿತು. ಕೆಲವು ದಶಕಗಳ ಕಾಲ ನೇಕಾರಿಕೆ ಉದ್ಯೋಗ ಶೋಭಾಯಮಾನವಾಗಿತ್ತು. ಆದರೆ, 1960ರ ವೇಳೆಗೆ ಪವರ್‌ಲೂಮ್ ಆರಂಭವಾದವು. 90ರ ದಶಕದವರೆಗೂ ಕೈಮಗ್ಗ ನೇಕಾರಿಕೆ ಉತ್ತಮ ಸ್ಥಿತಿಯಲ್ಲಿತ್ತು. ನಂತರ ಡಬ್ಲೃಟಿಒ ಒಪ್ಪಂದದ ನಂತರ ವಿದೇಶ ಬಟ್ಟೆ ಆಮದಿನಿಂದ ಜವಳಿ ಉದ್ಯಮ ಸಂಕಷ್ಟಕ್ಕೆ ಸಿಲುಕಿತು. ಬೆಳಗಾವಿ ಸೇರಿ ಇತರ ಪ್ರದೇಶಗಳಲ್ಲಿ ಕಾಟನ್ ಸೀರೆಗಳು ಮಾತ್ರ ಉತ್ಪಾದನೆಯಾಗುತ್ತಿದ್ದವು. ಹೀಗಾಗಿ ಗುಜರಾತ ಮತ್ತು ಮಹಾರಾಷ್ಟ್ರದಿಂದ ಪಾಲಿಸ್ಟರ್ ಮತ್ತು ಪ್ರಿಂಟೆಡ್ ಸೀರೆಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ಕೈಮಗ್ಗದಲ್ಲಿ ನೇಯ್ದ ಸೀರೆಗಳಿಗೆ ಬೇಡಿಕೆ ಕಡಿಮೆಯಾಯಿತು.

ಕ್ಷೀಣಿಸಿದ ಕೈಮಗ್ಗ: ಕೈಮಗ್ಗ ನೇಕಾರಿಕೆ ಶ್ರಮದ ಕೆಲಸ. ರಟ್ಟೆ ಗಟ್ಟಿ ಇದ್ದರೆ ಮಾತ್ರ ಈ ಉದ್ಯೋಗ ಮಾಡಬೇಕು. ಆದರೆ, ದಿನಪೂರ್ತಿ ಶ್ರಮ ಹಾಕಿ ದುಡಿದರೂ ಪ್ರತಿಲ ಅಷ್ಟಕ್ಕಷ್ಟೇ. ರಾಜ್ಯದಲ್ಲಿ ಮೂರ‌್ನಾಲ್ಕು ದಶಕಗಳ ಹಿಂದೆ ಲಕ್ಷಕ್ಕೂ ಅಧಿಕ ಕೈಮಗ್ಗಗಳು ಕಾಣಸಿಗುತ್ತಿದ್ದವು. ಇದೀಗ ಅವುಗಳ ಸಂಖ್ಯೆ 40 ಸಾವಿರಕ್ಕಿಂತ ಕೆಳಗೆ ಇಳಿದಿದೆ. ಬೆಳಗಾವಿ 2800 ಕೈಮಗ್ಗಗಳಿವೆ. ಇನ್ನೂ ಕೈಮಗ್ಗೆ ನೇಕಾರರ ಅಭಿವೃದ್ಧಿಗೆ ಇರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೂ ಸರ್ಕಾರ ಅನುದಾನ ನೀಡದೆ ಇರುವ ಕಾರಣಕ್ಕೆ ಅದು ಹಲ್ಲು ಕಿತ್ತ ಹಾವಿನಂತಾಗಿದೆ.

ನೇಕಾರರಿಗೆ ತಲುಪದ ಯೋಜನೆಗಳು: ಅವನತಿ ಅಂಚಿನಲ್ಲಿರುವ ಕೈಮಗ್ಗ ನೇಕಾರರಿಗೆ ಉತ್ತೇಜನ ನೀಡಬೇಕು ಎಂಬ ಉದ್ದೇಶದಿಂದ ಸರ್ಕಾರ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (ಎನ್‌ಎಚ್‌ಡಿಪಿ), ಮಹಾತ್ಮ ಗಾಂಧಿ ಬುನ್ಕರ್ ಬಿಮಾ ಯೋಜನೆ, ಆರೋಗ್ಯ ವಿಮಾ ಯೋಜನೆ, ಕೈಮಗ್ಗ ನೇಕಾರರಿಗೆ ತರಬೇತಿ (ಸ್ಟೈಫಂಡ್), ನಬಾರ್ಡ್ ಪುನರ್ಧನ ಯೋಜನೆಯಡಿ ಬಡ್ಡಿ ಸಹಾಯಧನ, ಹೊಸ ವಿನ್ಯಾಸ ಮತ್ತು ಪ್ರವೃತ್ತಿ (ಪ್ರವಾಸ), ಮಿತವ್ಯಯ ನಿಧಿ ಯೋಜನೆಯ ಬಡ್ಡಿ, ಕೈಮಗ್ಗ ಉತ್ಪನ್ನಗಳ ಮಾರಾಟ ಮೇಲೆ ಶೇ.20 ರಿಬೇಟ್ ಯೋಜನೆ, ಕೈಮಗ್ಗ ವಿಕಾಸ ಯೋಜನೆ ಹೀಗೆ ಇನ್ನೂ ಅನೇಕ ಯೋಜನೆ ಅನುಷ್ಠಾನಕ್ಕೆ ತಂದಿದೆ. ಆದರೆ, ಇವು ಕಾಗದದ ಹುಲಿಗಳಾಗಿವೆ. ಅಲ್ಲದೇ ಇವುಗಳ ಬಗ್ಗೆ ನೇಕಾರರಿಗೂ ಮಾಹಿತಿ ಇಲ್ಲ. ಹೀಗಾಗಿ ಕೈಮಗ್ಗ ನೇಕಾರರು ಸರ್ಕಾರದ ಸಹಾಯವಿಲ್ಲದೆ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.

ಇನ್ನು ವಿದ್ಯಾವಿಕಾಸ ಯೋಜನೆಯಡಿ ಕೈಮಗ್ಗ ನೇಕಾರರಿಂದ ಬಟ್ಟೆ ಖರೀದಿ ಮಾಡಿ ಕೈಮಗ್ಗ ನೇಕಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶ ಈ ಯೋಜನೆಯದ್ದಾಗಿತ್ತು. ಆದರೆ, ಇದೀಗ ಇದು ಬಂದ್ ಆಗಿದ್ದು ಇದರಿಂದ ನೇಕಾರರು ಶ್ರಮಪಟ್ಟು ದುಡಿದ ಬಟ್ಟೆಗಳು ಮಾರಾಟವಾಗುತ್ತಿಲ್ಲ. ನೇಕಾರರ ಮಕ್ಕಳಿಗೆ ಸ್ಕಾಲರ್‌ಶಿಪ್, ಜವಳಿ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಅನುದಾನ ನೀಡಲಾಗುತ್ತಿತ್ತು ಇದು ಬಂದ್ ಆಗಿದೆ. ಕೈಮಗ್ಗ ನೇಕಾರರಿಕೆ ಪ್ರತಿ ಮೀಟರ್‌ಗೆ 3 ರೂ. ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಇದನ್ನು ಪ್ರತಿ ಮೂರು ತಿಂಗಳಿಗೆ ನೇಕಾರರ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತಿತ್ತು. ಇದು ಕೂಡ ನೇಕಾರರಿಗೆ ಸಂದಿಲ್ಲ. ಹೀಗೆ ಅನೇಕ ಕೈಮಗ್ಗ ನೇಕಾರಿಕೆ ಉತ್ತೇಜನಕ್ಕೆ ಸರ್ಕಾರ ಕೈಗೊಂಡ ಯೋಜನೆಗಳು ಲಪ್ರದವಾಗದ ಹಿನ್ನೆಲೆಯಲ್ಲಿ ಕೈಮಗ್ಗ ನೇಕಾರಿಕೆ ಅಳವಿನಂಚಿಗೆ ಬಂದು ನಿಂತಿದೆ.

ಇಂದಿನ ಫ್ಯಾಷನ್ ಯುಗ, ಕಾರ್ಖಾನೆ ಬಟ್ಟೆಯ ಜತೆ ಪೈಪೋಟಿ ನೀಡುವ ಶಕ್ತಿ ಇಲ್ಲದಿರುವುದು, ಶ್ರಮ ಅಧಿಕ ಕಡಿಮೆ ಸಂಬಳ, ಸರ್ಕಾರ ನಿರ್ಲಕ್ಷ್ಯ, ಸೂಕ್ತ ಮಾರುಕಟ್ಟೆ ಇಲ್ಲದಿರುವುದು ಹೀಗೆ ನಾನಾ ಕಾರಣಗಳಿಂದ ಕೈಮಗ್ಗ ನೇಕಾರಿಕೆ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸರ್ಕಾರ ಈಗಲಾದರೂ ಎಚ್ಚೆತ್ತು ಕೈಮಗ್ಗ ಉಳಿವಿಗೆ ಶ್ರಮಿಸದೆ ಹೋದರೆ ಮುಂದಿನ ಪೀಳಿಗೆ ಕೈಮಗ್ಗಗಳನ್ನು ನಕಾಶೆಗಳಲ್ಲಿ ಕಾಣಬೇಕಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net