

ಮೈಸೂರು: ಶ್ರೀರಾಂಪುರದ ಸಂಕಷ್ಟಹರ ಗಣಪತಿ ದೇವಸ್ಥಾನದಲ್ಲಿ ಬುಧವಾರ ವಿಶ್ವ ಹಿಂದು ಪರಿಷತ್‌ನ ಷಷ್ಠಿಪೂರ್ತಿ ಹಾಗೂ ಸಂಸ್ಥಾಪನಾ ದಿನಾಚರಣೆ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಸರ್ವಜಯಾನಂದ ಮಹಾರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ರಾಮಾಯಣ, ಮಹಾಭಾರತ ತಿಳಿಸಿಕೊಡುವ ಕಾರ್ಯ ಆಗಬೇಕು. ಇಲ್ಲವಾದಲ್ಲಿ ಅವರು ಮುಂದೆ ರಾಮ ಕೃಷ್ಣರನ್ನೇ ಮರೆಯ ಬಹುದು. ನಾವು ಇಂದು ಪ್ರಾಪಂಚಿಕ ವಸ್ತುಗಳ ಮೇಲೆ ಪ್ರೀತಿಯನ್ನು ಹೊಂದುತ್ತಿದ್ದೇವೆ. ಆದರೆ, ನಾವು ಪ್ರೀತಿಸಬೇಕಾದುದು ದೇವರನ್ನು ಎಂದು ತಿಳಿಸಿದರು.
ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್. ನಾಗರಾಜ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮಂದಿರ ನಿರ್ಮಾಣದ ಸಂಕಲ್ಪತೊಟ್ಟು ಹೋರಾಟವನ್ನು ಮುನ್ನಡೆಸಿದ ವಿಶ್ವ ಹಿಂದು ಪರಿಷತ್ ತನ್ನ ಹೋರಾಟದಲ್ಲಿ ಯಶಸ್ಸು ಕಂಡಿದೆ. ಅಯೋಧೆಯಲ್ಲಿ ಶ್ರೀರಾಮಮಂದಿರ ನಿರ್ಮಾಣದಲ್ಲಿ ವಿಶ್ವ ಹಿಂದು ಪರಿಷತ್ ಪಾತ್ರ ಅಪಾರವಾದದ್ದು ಎಂದರು.
ಲಕ್ಷಾಂತರ ಜನರಿಗೆ ಇಂದಿಗೂ ರಾಮಮಂದಿರ ನೋಡಲು ಸಾಧ್ಯವಾಗಿಲ್ಲ. ಆ ಕೊರತೆ ನಿವಾರಿಸಲು ಮೈಸೂರಿನಲ್ಲೇ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಸಾದ ಹಾಗೂ ಸಪ್ತ ನದಿಗಳ ತೀರ್ಥ ವಿತರಣೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ವೆಂಕಟರಾಮ್ ಮಾತನಾಡಿ, ದೇಶ ಹಲವಾರು ಸಮಸ್ಯೆ, ಸವಾಲುಗಳನ್ನು ಎದುರಿಸಿಕೊಂಡು ಬರುತ್ತಿದೆ. ಹಿಂದುಗಳು ಸಂಘಟಿತರಾದರೆ ಮಾತ್ರ ದೇಶದ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಮಾತನಾಡಿ, ಮಕ್ಕಳಲ್ಲಿ ಇಂದು ನಾವು ಸಂಸ್ಕಾರ ಕಲಿಸದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನಾವೇ ಜವಾಬ್ದಾರರು. ಹಾಗಾಗಿ ಮಕ್ಕಳು ಪ್ರತಿ ನಿತ್ಯ ಮನೆಯಲ್ಲಿ ಶ್ಲೋಕ, ಪುರಾಣದ ಕತೆಗಳು, ಭಗವದ್ಗೀತೆ ಓದಬೇಕು ಎಂದರು.
ವಿಶ್ವ ಹಿಂದು ಪರಿಷತ್‌ನ ಷಷ್ಠಿಪೂರ್ತಿ ಕಾರ್ಯಕ್ರಮದ ಅಂವಾಗಿ ಸರಸ್ವತಿ ಭಾರತೀಯ ಸಂಸ್ಕಾರ ಕೇಂದ್ರದ ಸಹಭಾಗಿತ್ವದಲ್ಲಿ 75 ಮಕ್ಕಳಿಗೆ ಶ್ಲೋಕ, ಸಂಸ್ಕಾರ, ಪುರಾಣದ ಕತೆಗಳ ಒಂದು ತಿಂಗಳ ಶಿಬಿರ ಏರ್ಪಡಿಸಲಾಗಿತ್ತು. ಈ ಶಿಬಿರದಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುವೆಂಪುನಗರ ವಸತಿ ಸಂಘಚಾಲಕ ಜಿ.ಎಸ್.ಗಣೇಶ್, ಮಹಾಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಪ್ಪ, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಮಧುಶಂಕರ್, ಸಹಕಾರ್ಯದರ್ಶಿ ಪುನೀತ್ ಜಿ. ಕೂಡ್ಲೂರು ಹಾಗೂ ಇತರರು ಇದ್ದರು.