

ಮೂಡುಬಿದಿರೆ: ಯುವಪೀಳಿಗೆಗೆ ಪ್ರಾಚೀನ ಕನ್ನಡ ಸಾಹಿತ್ಯ ತಲುಪಿಸುವ ಕಾರ್ಯ ಮಾಡಬೇಕು. ನಾವು ಆಡುವ ಮಾತುಗಳು ಎದುರಿನವರಿಗೆ ಸಹ್ಯವಾಗಿರಬೇಕು. ಕಲಿಸುವ ಶಿಕ್ಷಕರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದೆ ಹೋದರೆ ಮಕ್ಕಳಲ್ಲಿ ಕನ್ನಡದ ಮೇಲೆ ಪ್ರೀತಿ ಮೂಡಲು ಸಾಧ್ಯವಿಲ್ಲ ಎಂದು ನಿವೃತ್ತ ಪ್ರಾಧ್ಯಾಪಕ ಎಸ್.ಪಿ.ಅಜಿತ್ ಪ್ರಸಾದ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕ.ಸಾ.ಪ. ಮೂಡುಬಿದಿರೆ ತಾಲೂಕು ಘಟಕ ಹಾಗೂ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್‌ನ ಶಿವರಾಮ ಕಾರಂತ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಮಾತನಾಡಿ, ಇದು 111ನೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಾಗಿದ್ದು ಇದರ ಮೂಲ ಉದ್ದೇಶ ಕನ್ನಡವನ್ನ್ನು ಉಳಿಸಿ ಬೆಳೆಸುವುದಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಂಕರಮೂರ್ತಿ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್‌ನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸುಶ್ಮಿತಾ ವಂದಿಸಿದರು. ಕಲ್ಪನಾ ಎನ್.ರಾವ್ ನಿರೂಪಿಸಿದರು.