

ಕೆಜಿಎಫ್: ಕಳೆದ ಎರಡೂವರೆ ವರ್ಷಗಳ ಹಿಂದೆ ನಗರದ ಹೃದಯ ಭಾಗದಲ್ಲಿ ನಿರ್ಮಿಸಲಾಗಿರುವ ಸಾರ್ವಜನಿಕ ಆಸ್ಪತ್ರೆ ಕಟ್ಟಡದ ಬುನಾದಿಯಲ್ಲಿ ಬಿರುಕು ಮೂಡಿದ್ದು, ಗುತ್ತಿಗೆದಾರ ಹಾಗೂ ಉಸ್ತುವಾರಿವಹಿಸಿಕೊಂಡಿದ್ದ ಇಂಜಿನಿಯರ್ಗಳ ಕಳಪೆ ಗುಣಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿದೆ.
ಆಸ್ಪತ್ರೆ ಕಟ್ಟಡವನ್ನು 2023ರ ಜ.25ರಂದು ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಉದ್ಘಾಟಿಸಿ, ಕೆಜಿಎಫ್ನಲ್ಲಿ ಅತ್ಯಾಧುನಿಕ ಕ್ಯಾಥ್ಲ್ಯಾಬ್ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಉದ್ಘಾಟನೆಗೊಂಡು 2ವರ್ಷಗಳಾಗುವ ಮೊದಲೇ ಕಟ್ಟಡದ ತಳಪಾಯದಲ್ಲಿ ಬಿರುಕು ಕಂಡು ಬಂದಿರುವುದರಿಂದ ಸರ್ಕಾರಿ ಕಟ್ಟಡಗಳ ಆಯುಸ್ಸು ಎಷ್ಟು ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.
ಹಿಂದೆ ಹಳೇ ಕಟ್ಟಡದಲ್ಲಿದ್ದ ಒಪಿಡಿ ಸೇರಿ ತುರ್ತು ಘಟಕ ಹಾಗೂ ವೈದ್ಯರ ಕೊಠಡಿಗಳು ಪ್ರಸ್ತುತ ಹೊಸ ಕಟ್ಟಡಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಿತ್ಯ ನೂರಾರು ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಒಳ ರೋಗಿಗಳಾಗಿ ಅನೇಕರು ದಾಖಲಾಗುತ್ತಿದ್ದಾರೆ. ಇದೀಗ ಕಟ್ಟಡದ ತಳ ಭಾಗದಲ್ಲೇ ಬಿರುಕು ಕಂಡು ಬಂದಿರುವುದರಿಂದ ಕಟ್ಟಡ ಎಷ್ಟು ಸೇಫ್ ಎಂಬ ಆತಂಕ ಎಲ್ಲರಲ್ಲೂ ಕಾಡುತ್ತಿದೆ. ಭಾರಿ ಅನಾಹುತ ಸಂಭವಿಸುವ ಮುನ್ನ ಸಾರ್ವಜನಿಕ ಆಸ್ಪತ್ರೆಯ ಡಿಎಸ್ ಹಾಗೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತುರ್ತು ಗಮನಹರಿಸಿ ಕಟ್ಟಡದ ದುರಸ್ತಿ ಮಾಡಬೇಕಿದೆ.
ಶಾಸಕಿ ರೂಪಕಲಾ ಅವರು ತಮ್ಮ ಕ್ಷೇತ್ರದ ಬಡವರಿಗೆ ಅನುಕೂಲವಾಗಲಿ, ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ದೊರೆಯಲಿ ಎಂಬ ಮಹದಾಸೆಯಿಂದ ಶ್ರದ್ಧೆವಹಿಸಿ, ಬಿಜೆಪಿ ಅಧಿಕಾರದಲ್ಲಿದ್ದಾಗ ಅನುದಾನ ಬಿಡುಗಡೆಗೊಳಿಸಿ 8 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಿದ್ದರು. ಆದರೀಗ ಬಿರುಕು ಮೂಡಿರುವುದರಿಂದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಟ್ಟಡದ ಗೋಡೆಗಳ ತಳಭಾಗದಲ್ಲಿ ಬಿರುಕು ಮೂಡಿರುವುದು ಗಮನಕ್ಕೆ ಬಂದ ಕೂಡಲೇ ಇಂಜಿನಿಯರಿಂಗ್, ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಇಂಜಿನಿಯರ್ಗಳೂ ಬಂದು ಸ್ಥಳ ಪರಿಶೀಲನೆ ನಡೆಸಿದ್ದು, ಕಟ್ಟಡದ ಗೋಡೆಗಳ ತಳಭಾಗದಲ್ಲಿ ಅಳವಡಿಸಿರುವ ಕಾಂಕ್ರೀಟ್ನಲ್ಲಿ ಬಿರುಕು ಬಂದಿದೆಯೇ ಹೊರತೂ ಕಟ್ಟಡದ ತಳಪಾಯಕ್ಕೂ ಬಿರುಕಿಗೂ ಸಂಬಂಧವಿಲ್ಲ, ಸಾರ್ವಜನಿಕರು ವಿನಾಕಾರಣ ಆತಂಕಪಡುವ ಅಗತ್ಯವಿಲ್ಲ. - ಡಾ.ಸುರೇಶ್ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕ, ಸರ್ಕಾರಿ ಆಸ್ಪತ್ರೆ ಕೆಜಿಎಫ್