ಮೇ.೯ ರಿಂದ ಪ್ರತಿಷ್ಠಾಪನಾ ವಾರ್ಷಿಕೋತ್ಸವ

koote mariyamma
Published on

ಮಡಿಕೇರಿ: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ದೈವ ಕೋಲವು ಮೇ೯ ರಿಂದ ೧೧ರ ವರೆಗೆ ನಡೆಯಲಿದೆ ಎಂದು ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಪಯ್ಯನ್ನೂರ್ ಆಚಾರ್ಯ ಈಶ್ವರನ್ ನಂಬೂದರಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನೆರವೇರಲಿದೆ. ಮೇ.೯ ರಂದು ಸಂಜೆ ೬ ಗಂಟೆಗೆ ಆಚಾರ್ಯ ವರಣಂ, ಪುಣ್ಯಹ ಶುದ್ಧಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ. ಮೇ೧೦ ರಂದು ಬೆಳಿಗ್ಗೆ ೬ ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಸ ಪೂಜೆ, ನವಕ ಪಂಚಗವ್ಯ ಕಳಸಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಶ್ರೀ ಪಾಷಾಣಮೂರ್ತಿ ದೈವದ ಕಳಸ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ ಎಂದು ತಿಳಿಸಿದೆ.

ನಾಗ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶದ ಪ್ರಯುಕ್ತ ಬೆಳಿಗ್ಗೆ ೮ ಗಂಟೆಯಿಂದ ಆಶ್ಲೇಷ ಬಲಿ, ನಾಗಪೂಜೆ, ಕ್ಷೀರಾಭೀಷೇಕ ನಡೆಯಲಿದ್ದು, ೧೧ ಗಂಟೆಗೆ ನಾಗದರ್ಶನ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಲಿದೆ. ಉಡುಪಿಯ ಪೆರ್ಲಂಬಾಡಿಯ ರಮಾನಂದ ಭಟ್ ನಾಗಪಾತ್ರಿಗಳಾಗಿ ನಾಗಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ನಾಗದರ್ಶನ ನಡೆಸಿಕೊಡಲಿದ್ದಾರೆ. ಸಂಜೆ ೭.೩೦ ರಿಂದ ಶ್ರೀ ಪಾಷಾಣಮೂರ್ತಿ ದೈವ ಕೋಲ ನಡೆಯಲಿದೆ.

ಅಗೆಲು ಸೇವೆ: ಮೇ.೧೧ ರಂದು ಸಂಜೆ ೫ ಗಂಟೆಯಿಂದ ಶ್ರೀ ಪಾಷಾಣಮೂರ್ತಿ ದೈವದ ಅಗೆಲು ಸೇವೆ ನಡೆಯಲಿದೆ. ನಾಗದರ್ಶನದ, ಪಾಷಾಣಮೂರ್ತಿ ದೈವದ ಅಗೆಲು ಸೇವೆ, ಪಟ್ಟಸೀರೆ, ಚಿನ್ನ-ಬೆಳ್ಳಿ ಅರ್ಪಣೆ, ಮಲ್ಲಿಗೆ ಹೂವನ್ನು ಹರಕೆ ರೂಪದಲ್ಲಿ ಸ್ವೀಕರಿಸಲಾಗುವುದೆಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net