

ದೊಡ್ಡಬಳ್ಳಾಪುರ ಗ್ರಾಮಾಂತರ: ಮಧುರೆ ಹೋಬಳಿಯ ಕನಸವಾಡಿಯ ಮುಖ್ಯರಸ್ತೆ ಬದಿಯಲ್ಲಿ ಸಂಗ್ರಹವಾದ ಕಸದ ರಾಶಿಯಿಂದ ವಾಹನ ಸವಾರರು ಮೂಗುಮುಚ್ಚಿ ಓಡಾಡುವಂತಾಗಿದೆ.
ಐತಿಹಾಸಿಕ ಶನಿಮಹಾತ್ಮದೇವಾಲಯ ಸಮೀಪದಲ್ಲಿ ಕಸದ ರಾಶಿ ತುಂಬಿದ್ದು, ಭಕ್ತರಿಗೆ ಕಸಿವಿಸಿ ಉಂಟುಮಾಡಿದೆ. ಗ್ರಾಮ ಸಮೀಪದ ಮಾರಸಂದ್ರ ರಸ್ತೆಯ ಮೋರಿ ತುಂಬಾ ರಾಶಿ ರಾಶಿ ಕಸ ಸಂಗ್ರಹವಾಗಿದೆ. ಸುತ್ತ ಮುತ್ತಲಿನ ಅಂಗಡಿಗಳ ತ್ಯಾಜ್ಯ, ನೀರಿನ ಬಾಟಲಿ, ಪ್ಲಾಸ್ಟಿಕ್ ಮೋರಿ ತುಂಬಿವೆ. ಕಸ ನಿರ್ವಹಣೆ ಮಾಡಬೇಕಾದ ಗ್ರಾಪಂ ಅಧಿಕಾರಿಗಳು, ಸದಸ್ಯರು ಕಂಡೂ ಕಾಣದಂತೆ ಮೌನವಾಗಿದ್ದಾರೆ.
ಗೊಬ್ಬರ ಕಂಪನಿಯಿಂದ ಪರಿಸರ ಹಾಳು: ಕನಸವಾಡಿ ಸಮೀಪದಲ್ಲಿ ಅನೇಕ ವರ್ಷಗಳಿಂದ ಗೊಬ್ಬರ ತಯಾರಿಕೆ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ನೂರಾರು ಲಾರಿಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಕಾರಣ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸಂಚರಿಸುವಾಗ ಧೂಳು ತುಂಬಿ ಜನರು ಓಡಾಡಲು ಕಷ್ಟಪಡುವಂತಾಗಿದೆ. ಈ ಬಗ್ಗೆ ಯಾರೂ ಚಕಾರವೆೆತ್ತದಿರುವುದು ಆಶ್ಚರ್ಯವಾಗಿದೆ.
ನೂತನವಾಗಿ ಆಯ್ಕೆಯಾಗಿರುವ ಸದಸ್ಯರ ಸಭೆ ನಡೆಸಿ, ಮುಖ್ಯ ರಸ್ತೆಯಲ್ಲಿರುವ ಕಸ ತೆರವುಗೊಳಿಸಲಾಗುವುದು. ಸಮೀಪದ ಗೊಬ್ಬರ ಕಂಪನಿ ನಿಯಮ ಉಲ್ಲಂಘಿಸಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು. | ಲಕ್ಷ್ಮೀನರಸಪ್ಪ, ಪಿಡಿಒ, ಕನಸವಾಡಿ ಗ್ರಾಪಂ ಕನಸವಾಡಿ ಸಮೀಪದ ಗೊಬ್ಬರ ಕಂಪನಿಯಿಂದ ನಿತ್ಯ ಸಂಚರಿಸುವ ಲಾರಿಗಳಿಂದ ರಸ್ತೆ ಸಂಪೂರ್ಣ ಧೂಳುಮಯವಾಗಿದೆ. ಕೂಡಲೇ ಡಾಂಬರೀಕರಣ ಮಾಡಿ, ಜನರ ಸಂಕಷ್ಟ ದೂರಮಾಡಬೇಕು. | ಅಭಿಜಿತ್, ಕನಸವಾಡಿ ನಿವಾಸಿ