ಸರ್ಕಾರಿ ಶವಗಾರದಲ್ಲಿ ದುರ್ವಾಸನೆ, ಅವ್ಯವಸ್ಥೆ:ಶಾಸಕ ಗರಂ

IMG_20251003_230220.jpg
Published on

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯ ಶವಗಾರದ ಅವ್ಯವಸ್ಥೆಗೆ ಶಾಸಕ ಸುಬ್ಬಾರೆಡ್ಡಿ ಗರಂ ಆಗಿದ್ದಾರೆ. ಸಮರ್ಪಕ ಸೌಕರ್ಯಗಳೊಂದಿಗೆ ಸೂಕ್ತವಾಗಿ ನಿರ್ವಹಿಸಲು ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ
ಅಚೇಪಲ್ಲಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬದವರಿಗೆ ಸ್ವಾಂತನ ಹೇಳಲು ಶಾಸಕರು ಶವಗಾರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿನ ಗಬ್ಬು ವಾಸನೆ ಬೀರುತ್ತಿರುವುದರ ಜತೆಗೆ  ಅವ್ಯವಸ್ಥೆಗಳನ್ನು ಕಂಡು ಸ್ಥಳದಲ್ಲಿಯೇ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿಯನ್ನು  ತರಾಟೆಗೆ ತೆಗೆದುಕೊಂಡರು. ಮೊದಲು ಸ್ವಚ್ಛತೆಗೆ ಆಧ್ಯತೆ ನೀಡಲು ಸೂಚಿಸಿದರು. 
ಘಟನಾ ಸ್ಥಳಕ್ಕೆ ಆಡಿಷನಲ್ ಎಸ್ಪಿ ಜಗನ್ನಾಥ್ ರೈ, ಇನ್ಸ್ ಪರ ಕ್ಟರ್ ಪ್ರಶಾಂತ್ ವರ್ಣಿ, ತಹಶೀಲ್ದಾರ್ ಮನೀಷಾ ಪತ್ರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ, ಬಿಆರ್‌ಸಿ ವೆಂಕಟರಾಮ್ ಬೇಟಿ ನೀಡಿ, ಮೃತ ವಿದ್ಯಾರ್ಥಿಗಳ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡರು. ಮೃತ ವಿದ್ಯಾರ್ಥಿಗಳ ಪಾಲಕರಿಗೆ ಸಾಂತ್ವನ ಹೇಳಿದರು.

*ಮೃತರ ಕುಟುಂಬಗಳಿಗೆ ಪರಿಹಾರ
ಶಾಲಾ ಕಾಲೇಜುಗಳಿಗೆ ರಜೆ ನೀಡಿರುವಂತಹ ಸಮಯದಲ್ಲಿ ಮಕ್ಕಳ ಬಗ್ಗೆ ಪಾಲಕರು ನಿಗಾವಹಿಸಬೇಕಾಗಿದೆ. ವಿದ್ಯಾರ್ಥಿಗಳ ಸಾವಿನ ದುರ್ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು. ಜತೆಗೆ ವೈಯಕ್ತಿಕವಾಗಿ ತಲಾ ೧ ಲಕ್ಷ ರೂಗಳ ಪರಿಹಾರವನ್ನು ನೀಡುತ್ತೇನೆಂದು ಶಾಸಕರು ಘೋಷಿಸಿದರು.

*ಮೂವರ ಸಾವು
ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೬ ನೇ ತರಗತಿ ವಿದ್ಯಾರ್ಥಿ ನಿಹಾಲ್ ರಾಜ್ (೧೧ ವರ್ಷ), ೮ ನೇ ತರಗತಿ ವಿದ್ಯಾರ್ಥಿ ವಿಷ್ಟುವರ್ಧನ್(೧೩ ವರ್ಷ) ಹಾಗೂ ಬಾಗೇಪಲ್ಲಿ ಪಟ್ಟಣದ ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷವರ್ಧನ್ (೧೬ ವರ್ಷ) ಸೇರಿ ಮೂವರು ವಿದ್ಯಾರ್ಥಿಗಳು ಅಚೇಪಲ್ಲಿ ಗ್ರಾಮದ ಕೆರೆಗೆ ಈಜಲು ಹೋಗಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net