ದಡವ ಬಿಟ್ಟು ನೀರಿಗಿಳಿಯದ ದೋಣಿ

Published on

ಕಾರವಾರ : ಇಲ್ಲಿನ ಟ್ಯಾಗೋರ್ ಕಡಲ ತೀರದ ಮರಳಿನಲ್ಲಿ ಸಿಲುಕಿದ ಮೀನುಗಾರಿಕೆ ದೋಣಿಯನ್ನು ಮರಳಿ ನೀರಿಗೆಳೆಯಲಾಗದೇ ಮಾಲೀಕರು ಕಾರ್ಮಿಕರು ತೊಂದರೆಪಡುತ್ತಿದ್ದಾರೆ.
ಹವಾಮಾನ ವೈಪರೀತ್ಯದ ಕಾರಣ ಮಲ್ಪೆ ಭಾಗದ ನೂರಾರು ಆಳ ಸಮುದ್ರ ಮೀನುಗಾರಿಕೆ ದೋಣಿಗಳು ಸೆ.28 ರಂದು ಕಾರವಾರ ಬಂದರಿನ ಸಮೀಪ ಲಂಗರು ಹಾಕಿದ್ದವು. ಸೆ. 29 ರ ರಾತ್ರಿ ಬೀಸಿದ ಭಾರಿ ಗಾಳಿಗೆ ಮಿಸ್ಬಾ ಹೆಸರಿನ ದೋಣಿ ಲಂಗರು ತುಂಡಾಗಿ ದಡಕ್ಕೆ ಬಂದು ಅಪ್ಪಳಿಸಿತ್ತು. ಅಬ್ಬರದ ಅಲೆ ಗಾಳಿಯ ಪರಿಣಾಮ ದೋಣಿ ಮರಳಿನಲ್ಲಿ ಸಿಲುಕಿಕೊಂಡಿತು.


ಸಮುದ್ರದಲ್ಲಿದ್ದ ಬೇರೆ ದೋಣಿಗಳಿಗೆ ಹಗ್ಗ ಕಟ್ಟಿ ಎಳೆಯುವ ಪ್ರಯತ್ನ ನಡೆಯಿತಾದರೂ ಹಗ್ಗ ತುಂಡಾಯಿತೇ ಹೊರತು ದೋಣಿ ಮರಳು ಬಿಟ್ಟು ನೀರಿಗಿಳಿದಿಲ್ಲ. ನಂತರ ಎರಡು ಜೆಸಿಬಿ, ಕ್ರೇನ್ ತರಿಸಿ ಎರಡು ದಿನಗಳಿಂದ ದೋಣಿಯನ್ನು ನೀರಿಗೆ ನೂಕುವ ಯತ್ನ ನಡೆದಿದೆ. ಅದೂ ಸಾಧ್ಯವಾಗಿಲ್ಲ.
ಬಂದರು ಇಲಾಖೆಯ ಟಗ್ ಬೋಟ್ ಇದೆಯಾದರೂ ಸಮುದ್ರ ಆಳವಿಲ್ಲದ ಕಾರಣ ನೀರಿಗೆ ಅದನ್ನು ತರಿಸಲು ಸಾಧ್ಯವಾಗುತ್ತಿಲ್ಲ. ದೂರದಿಂದ ಎಳೆಯಲು ಸಾಕಷ್ಟು ಉದ್ದದ ಹಾಗೂ ಅಽಕ ಭಾರ ತಡೆಯಬಹುದಾದ ರೋಪ್ ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ದೋಣಿಯ ಮಾಲೀಕ. ದೋಣಿಯನ್ನು ದಡದಿಂದ ನೀರಿಗಿಳಿಸುವ ಪ್ರಯತ್ನದಲ್ಲಿ ಈಗಾಗಲೇ ಅದರ ಹಲವು ಭಾಗಗಳಿಗೆ ಹಾನಿಯಾಗಿದೆ 10 ಲಕ್ಷಗಳಿಗೂ ಅಽಕ ಖರ್ಚಿದೆ ಎಂದು ಮಾಲೀಕರು ಗೋಳು ತೋಡಿಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net