

ತ್ಯಾಮಗೊಂಡ್ಲು: ರಾಜ್ಯದಲ್ಲಿ ಲಾಕ್‌ಡೌನ್‌ನಿಂದ ರಕ್ತ ಸಂಗ್ರಹ ಕಡಿಮೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಈ ದಿನ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸ್ವಯಂಪ್ರೇರಿತ ರಕ್ತದಾನಕ್ಕೆ ಮುಂದಾಗಿದ್ದಾರೆ ಎಂದು ನೆಲಮಂಗಲ ತಾಲೂಕು ಭಾಜಪ ಪ್ರಧಾನ ಕಾರ್ಯದರ್ಶಿ ಜಿ.ಮಂಜುನಾಥ್ ಹೇಳಿದರು.
ಪಟ್ಟಣದ ಶಾರದಾ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ಯೋಧರ ಮತ್ತು ಹುತಾತ್ಮ ಸೇನಾನಿಗಳ ನೆನಪಿನಲ್ಲಿ ತ್ಯಾಮಗೊಂಡ್ಲು ಭಾಜಪ ಶಕ್ತಿಕೇಂದ್ರ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಬಿರದಲ್ಲಿ ಆರೋಗ್ಯ ಇಲಾಖೆ ಎಲ್ಲ ಮಾರ್ಗಸೂಚಿ ಅನುಸರಿಸಲಾಗಿದೆ. ಪರಸ್ಪರ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಮತ್ತು ಮಾಸ್ಕ್ ಉಪಯೋಗಿಸಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ರಾಮಕೃಷ್ಣಪ್ಪ ಮಾತನಾಡಿ, ಕರೊನಾದಿಂದ ರಕ್ತದಾನಕ್ಕೆ ದಾನಿಗಳು ಹೆದರುತ್ತಿದ್ದಾರೆ. ಆದರೆ ಕರೊನಾಗೆ ಹೆದರುವ ಅವಶ್ಯಕತೆಯಿಲ್ಲ, ಸನಾತನ ಭಾರತದ ಆಯುರ್ವೇದ ಅತ್ಯುತ್ತಮ ಎಂದು ಸಾಬೀತಾಗಿದೆ, ಸ್ವಚ್ಛತೆ ಮತ್ತು ಕಷಾಯದಿಂದ ಎಲ್ಲರೂ ಆರೋಗ್ಯವಾಗಿರಬಹುದು ಎಂದರು.
ಶಿಬಿರದಲ್ಲಿ 85 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ.ನಾಗರಾಜು, ತಾಲೂಕು ಅಧ್ಯಕ್ಷ ಜಿ.ಹೇಮಂತ್‌ಕುಮಾರ್, ತಾಲೂಕು ನಗರ ಪ್ರಧಾನ ಕಾರ್ಯದರ್ಶಿ ಎಂ.ರವಿಕುಮಾರ್, ಗ್ರಾಪಂ ಮಾಜಿ ಸದಸ್ಯ ವಿ.ಸುಂದರ್‌ರಾಜು, ಸಿ.ಎಲ್.ಜಗದೀಶ್‌ಪ್ರಸಾದ್, ಎಂ.ಮಂಜುಳಾ, ಕಾರ್ಯಕರ್ತರಾದ ಟಿ.ಎ.ರಾಮಚಂದ್ರಬಾಬು, ಎಸ್.ಅಭಿಷೇಕ್, ಟಿ.ಎ.ಬಾಲಕೃಷ್ಣ, ಕೆ.ಎನ್.ರಕ್ಷಿತ್, ತಿಮ್ಮಸಂದ್ರ ರಂಗಣ್ಣ, ರಾಯರಪಾಳ್ಯ ಮಹೇಶ್ ಮತ್ತಿತರರಿದ್ದರು.