

ಬೆಟ್ಟದಪುರ: ಬೆಟ್ಟದಪುರದ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆರೋಗ್ಯ ಇಲಾಖೆಯಿಂದ ತೀವ್ರತರ ಅತಿಸಾರ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಲತಾ ಮಾತನಾಡಿ, ತೀವ್ರ ಅತಿಸಾರಕ್ಕೆ ಗುರಿಯಾಗಿ ಉಂಟಾಗುತ್ತಿರುವ ಮಕ್ಕಳ ಸಾವಿನ ಸಂಖ್ಯೆಯನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಜೂ.16ರಿಂದ ಜೂ. 31ರವರೆಗೆ ವಿಶೇಷ ಅರಿವು ಹಾಗೂ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಜನಸಾಮಾನ್ಯರಲ್ಲಿ ಮುಖ್ಯವಾಗಿ ಪಾಲಕರು, ಮಕ್ಕಳಲ್ಲಿ ಪರಿಸರ ನೈರ್ಮಲ್ಯ, ಕೈತೊಳೆಯುವ ವಿಧಾನ, ವೈಯಕ್ತಿಕ ಶುಚಿತ್ವ, ಅತಿಸಾರ ಭೇದಿಗೆ ಒಳಗಾದ ಮಕ್ಕಳ ಆರೈಕೆ ಹಾಗೂ ಚಿಕಿತ್ಸೆ ನೀಡುವ ವಿಧಾನದ ಬಗ್ಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ ಎಂದರು.
ಕೇಂದ್ರದ ವೈದ್ಯಾಧಿಕಾರಿ ಡಾ.ಪೂಜಾ ಮಾತನಾಡಿ, ಅತಿಸಾರ ಭೇದಿಯು ಐದು ವರ್ಷದೊಳಗಿನ ಮಕ್ಕಳಲ್ಲಿ ಕಂಡು ಬರುವ ಮಾರಣಾಂತಿಕ ಕಾಯಿಲೆಯಾಗಿದೆ. ಇದರ ತಡೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಮನೆಗಳಲ್ಲಿ ಸೇರಿದಂತೆ ನಮ್ಮ ಸುತ್ತಮುತ್ತಲಿನ ವಾಸಿಸುವ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ಚೆನ್ನಮ್ಮ, ಕುಮಾರ್, ದೇವಕ್ಕ, ಕುಸುಮಾ, ಸುಮಿತ್ರಾ, ಮಂಜುಳಾ, ರಾಧಮ್ಮ, ಶಾಮ್ಯಾ ಸೇರಿದಂತೆ ಆಶಾ ಕಾರ್ಯಕರ್ತೆಯರು ಇದ್ದರು.