ದೃಢ ಭಕ್ತಿಯೇ ರೋಗಕ್ಕೆ ದಿವ್ಯ ಔಷಧ

2
ಘಟನಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಸಿದ್ಧಲಿಂಗೇಶ್ವರ ಸ್ವಾಮೀಜಿ ಮಾತನಾಡಿದರು. ಅಮರೇಶ್ವರ ಮಹಾರಾಜರು, ಸಿದ್ಧರಾಮಯ್ಯ ಅಜ್ಜನವರು, ಬನಸಿದ್ಧೇಶ್ವರ ಮಹಾರಾಜರು, ಸ್ವರೂಪಾನಂದ ಸ್ವಾಮೀಜಿ ಇತರರಿದ್ದರು.
Published on

ಅಥಣಿ ಗ್ರಾಮೀಣ: ಧರ್ಮ, ಪರಂಪರೆ, ಸಂಸ್ಕೃತಿಯೇ ಭಾರತ ದೇಶದ ಜೀವಾಳವಾಗಿದೆ. ಇಲ್ಲಿಯ ಜನರು ಪ್ರಕೃತಿಯಲ್ಲಿಯೇ ದೇವರನ್ನು ಕಾಣುವ ಮೂಲಕ ಪ್ರೀತಿ, ವಿಶ್ವಾಸ, ಮಾನವಿಯತೆಯೇ ಜೀವನದ ಬಂಡವಾಳ ಎಂದು ತಿಳಿದು ಬದುಕು ಸಾಗಿಸುತ್ತಿದ್ದಾರೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದಲ್ಲಿ ಚಂದ್ರಯ್ಯ ಅಜ್ಜನವರ ಶಕ್ತಿಪೀಠ ಲೋಕಾರ್ಪಣೆ ಮತ್ತು ಚಂದ್ರಯ್ಯ ಅಜ್ಜನವರ ಹಾಗೂ ಚಂದ್ರಗಿರಿ ದೇವಿ ಕಂಚಿನ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಮಾತನಾಡಿ, ಭಕ್ತಿ ನಂಬಿಕೆಯಿಂದಲೆ ಬಬಲಾದಿ ಸದಾಶಿವ ಅಜ್ಜನವರ ಅಂಬಲಿ, ತೀರ್ಥ, ಪ್ರಸಾದ ಸಾವಿರಾರು ಜನರ ಪ್ರಾಣ ಉಳಿಸಿದೆ. ವೈಜ್ಞಾನಿಕವಾಗಿ ಎಷ್ಟೆ ಮುಂದುವರಿದರೂ ದೈವಬಲ ಎಂಬ ದೃಢ ಭಕ್ತಿಯೇ ರೋಗಕ್ಕೆ ದಿವ್ಯ ಔಷಧವಾಗಿದೆ ಎಂದರು.

\ಬಬಲಾದಿಯ ಸಿದ್ಧರಾಮಯ್ಯ ಅಜ್ಜನವರು ಮಾತನಾಡಿ, ಬಬಲಾದಿ ಸದಾಶಿವ ಅಜ್ಜನವರ ಕಾಲಜ್ಞಾನ ಇಡೀ ವರ್ಷದ ನೈಸರ್ಗಿಕ ಮಳೆ, ಬೆಳೆ, ರಾಜಕೀಯದ ಏಳು-ಬೀಳು ತಿಳಿಸುವ ಭವಿಷ್ಯ ಪುಸ್ತಕದವಾಗಿದೆ. ಈ ಕಾಲ ಜ್ಞಾನ ಸುಳ್ಳಾದ ಇತಿಹಾಸವೆ ಇಲ್ಲ. ಭಕ್ತಿಯಿಂದ ಮಠಕ್ಕೆ ನಡೆದುಕೊಂಡರೆ ಇಷ್ಟಾರ್ಥಗಳು ಈಡೇರಲಿವೆ ಎಂದರು.

ನದಿ ಇಂಗಳಗಾಂವದ ಸಿದ್ಧಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಮಹಾನ್ ಪುರುಷರ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಹಸನಾಗುವುದು ಎಂದರು.

ಬೆಳಗ್ಗೆ ಹೋಮ-ಹವನ, ಉಮಾರಾಮೇಶ್ವರಿ ಪೂಜಾ ಕಾರ್ಯಕ್ರಮ ನೆರವೇರಿತು. ಬಳಿಕ ಚಂದ್ರಯ್ಯ ಅಜ್ಜನವರ ಹಾಗೂ ಚಂದ್ರಗಿರಿ ದೇವಿಯ ಕಂಚಿನ ಮೂರ್ತಿ ಪ್ರತಿಷ್ಠಾಪನೆಗೊಳಿಸಿ ರುದ್ರಾಭಿಷೇಕ ನೆರವೇರಿಸಲಾಯಿತು.

ಬಾಡಗಿಯ ಬನಸಿದ್ಧೇಶ್ವರ ಮಹಾರಾಜರು, ಕೋಳಿಗುಡ್ಡದ ಸ್ವರೂಪಾನಂದ ಸ್ವಾಮೀಜಿ ಮಾತನಾಡಿದರು. ಮುಖಂಡರಾದ ಬಂಡು ಜಗತಾಪ, ಬಸಪ್ಪ ಚಿಮ್ಮಡ, ನರಸಿಂಗ ಮೋಹಿತೆ, ಮಲ್ಲಯ್ಯ ಮಠಪತಿ, ಶ್ರೀಕಾಂತ ಅಥಣಿ, ಸರ್ವೇಶ ಮಠಪತಿ, ರಾಜಶೇಖರ ಜಮಖಂಡಿ, ಜಯಪಾಲ ಪಾಲಬಾವಿ, ಕುಮಾರ ಗಲಗಲಿ, ಶ್ರೀಪತಿ ಭೋಸಲೆ, ಶ್ರೀಮಂತ ನಡುವಿನಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net