

ಕಂಪ್ಲಿ: ಇಲ್ಲಿನ ಕೋಟೆಯ ಬಸ್ ನಿಲ್ದಾಣದಲ್ಲಿ ಎಲ್ಲ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ಶಾಸಕ ಜೆ.ಎನ್.ಗಣೇಶ್, ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ, ಸಂಚಾರಿ ನಿಯಂತ್ರಕ ರೇವಣಸಿದ್ದಪ್ಪಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಮಣ್ಣೂರು ನವೀನ್‌ಗೌಡ ಮಾತನಾಡಿ, ಕೋಟೆಯ ಬಸ್ ನಿಲ್ದಾಣದಲ್ಲಿ ಬಳ್ಳಾರಿ-ಗಂಗಾವತಿ, ಹೊಸಪೇಟೆ-ಗಂಗಾವತಿಯಂತಹ ಸಾಮಾನ್ಯ ಬಸ್‌ಗಳು ನಿಲುಗಡೆಯಾಗದೆ ಪ್ರಯಾಣಿಕರಿಗೆ ತೊಂದರೆಯಾಗಿದೆ. ಇಲ್ಲಿ ನಿಲ್ಲಿಸದೆ ಕಂಪ್ಲಿಯಲ್ಲಿ ಇಳಿಸುವುದರಿಂದ ಬಹಳಷ್ಟು ಅನನುಕೂಲವಾಗುತ್ತಿದೆ.
ಹೊಸಪೇಟೆ ಸಾರಿಗೆ ಸಂಸ್ಥೆಯಿಂದ 2019ರ ಡಿ.4ರಂದು ಕಡ್ಡಾಯ ನಿಲುಗಡೆಗೆ ಆದೇಶವಾಗಿದ್ದರೂ ಪಾಲಿಸುತ್ತಿಲ್ಲ. ಕೋಟೆಯ ಮೂಲಕ ಸಂಚರಿಸುವ ಎಲ್ಲ ಸಾರಿಗೆ ವಿಭಾಗಗಳ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯ ಎಂ.ಹೊನ್ನೂರವಲಿ, ಸಂಘದ ಪದಾಧಿಕಾರಿಗಳಾದ ಕಟ್ಟೆ ಮಾರೆಪ್ಪ ಕಂಬತ್ ಕೃಷ್ಣ, ಬಾಗಲಿ ಮಂಜುನಾಥ, ಜೋಗಿನಾಯ್ಕ ರುದ್ರಪ್ಪ, ಶೆರೆಗಾರ ಕೃಷ್ಣ, ಶೆರೆಗಾರ ಮಾರುತಿ, ಅಳ್ಳಿ ಕೊಟ್ರೇಶ್, ಸಂತೋಷ, ಬಿ.ಮಂಜುನಾಥ ಇತರರಿದ್ದರು.
ಇದಕ್ಕೆ ಸ್ಪಂದಿಸಿದ ಶಾಸಕ ಗಣೇಶ್ ಅವರು ಸಾರಿಗೆ ಸಂಸ್ಥೆ ಅಧಿಕಾರಿಗೆ ಕರೆ ಮಾಡಿ, ಕೋಟೆಯಲ್ಲಿ ಕಡ್ಡಾಯವಾಗಿ ಬಸ್‌ಗಳನ್ನು ನಿಲುಗಡೆಗೊಳಿಸಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.