ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿ

IMG20241121204140.jpg
Published on

ಬೆಳಗಾವಿ: ಮಕ್ಕಳ ಕಲಿಕಾ ಮಟ್ಟಕ್ಕನುಗುಣವಾಗಿ ಅವರನ್ನು ಮೂರು ಭಾಗಗಳಾಗಿ ವಿಭಜಿಸಿ, ನಿಧಾನವಾಗಿ ಕಲಿಯುವ ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಲು ವಿಶೇಷ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಬೆಳಗಾವಿ ಗ್ರಾಮೀಣ ವಲಯದ ಪ್ರೌಢ ವಿಭಾಗದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರ ತಾರಾಪುರ ಸಲಹೆ ನೀಡಿದರು.

ತಾಲೂಕಿನ ಮುತ್ನಾಳ ಗ್ರಾಮದ ರವಿರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಬೆಳಗಾವಿ ತಾಲೂಕಾ ಮಟ್ಟದ ಸಮಾಜ ವಿಜ್ಞಾನ ವಿಷಯದ ಒಂದು ದಿನದ ಕಾರ್ಯಾಗಾರಕ್ಕೆ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಹಿಂದುಳಿದ ಮಕ್ಕಳ ವಯಕ್ತಿಕ ಅಧ್ಯಯನ ಮಾಡಿ, ಅವರ ಕಲಿಕೆಯ ಹಿನ್ನಡೆಗೆ ಕಾರಣ ಏನು? ಎಂಬುದನ್ನು ಪತ್ತೆ ಹಚ್ಚಿ, ಅದಕ್ಕೆ ನುರಿತ ಪರಿಣಿತರ ಹಾಗೂ ಮನೋವೈದ್ಯರಿಂದ ಪರಿಹಾರ ಒದಗಿಸುವ ಕೆಲಸ ಆಗಬೇಕು ಎಂದರು.

ಸಮಾಜ ವಿಜ್ಞಾನ ಸಂಘದ ನೋಡಲ್ ಅಧಿಕಾರಿ ಜಯಪ್ರಕಾಶ ಪತ್ತಾರ ಮಾತನಾಡಿ, ಅನೇಕ ಒತ್ತಡಗಳು ನಮ್ಮ ಮೇಲಿದ್ದರೂ ಫಲಿತಾಂಶ ಉತ್ತಮಗೊಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅಶೋಕ ಕೊಳಮುಸ್ಕರ ಮಾತನಾಡಿ, ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಸಮಾನವಾಗಿ ಅಧ್ಯಯನ ಮಾಡಿ ಬರವಣಿಗೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಈ ಕಾರ್ಯಗಾರದಲ್ಲಿ ಎಂ.ಬಿ. ಬಾಚಿಕರ, ಗಜಾನನ ಧಾಮಣೆಕರ, ಚಿದಾನಂದ ಪಾಟೀಲ, ಬಸಪ್ಪ ಅಡಿವೇರ, ಶಶಿಕಲಾ ಪಾಟೀಲ, ಸುನೀತಾ ಕುಸಗುಂಡಿ, ಸುಮಿತ್ರಾ ಕವಿನಕೊಪ್ಪ, ಸಂಜಯ ಗೋಡ್ಯಾಳಕರ, ಜಿ.ಬಿ. ಕುರಬೇಟ, ಮಾರುತಿ ಅಜಾನಿ ಹಾಗೂ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಸಮಾಜ ವಿಜ್ಞಾನ ಶಿಕ್ಷಕರು ಪಾಲ್ಗೊಂಡಿದ್ದರು. ಶೈಲಾ ಯಳಮಲಿ ಸ್ವಾಗತಿಸಿದರು. ಬಿ.ಎಲ್. ಕುಂಬಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net